bjp slams hijab mandatory 
ಕಲಬುರಗಿ

ಹಿಜಾಬ್​ ಕಡ್ಡಾಯಕ್ಕೆ ಸಿಡಿದ ಬಿಜೆಪಿ: ಕಲಬುರಗಿಯಲ್ಲಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯಲ್ಲಿ ಬೃಹತ್​ ಪ್ರತಿಭಟನೆ
  • ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿ
ಕಲಬುರಗಿ:
ಶಾಲಾ&-ಕಾಲೇಜುಗಳಲ್ಲಿ ಹಿಜಾಬ್​ ಧರಿಸಲು ಅನುಮತಿ ನೀಡಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿವಾದಾತ್ಮಕ ಆದೇಶ ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆ ಕೂಗಿ ಸರ್ಕಾರದ ನೀತಿಯನ್ನು ಖಂಡಿಸಿದರು.
ಶಾಲೆ ಮಕ್ಕಳಲ್ಲಿ ಸಮಾನತೆ ಮತ್ತು ಏಕತೆ ಮೂಡಿಸಲು ಜಾರಿಗೆ ತಂದ ಸಮವಸ್ತ್ರ ನಿಯಮ ಕಾಂಗ್ರೆಸ್​ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಗಾಳಿಗೆ ತೂರುತ್ತಿದೆ. ಮಕ್ಕಳಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತಿರುವ ಸರ್ಕಾರದ ನಡೆ ಅಪ್ಪಟ ತುಲಕ್​ ದರ್ಬಾರ್​ ಎಂದು ಕಿಡಿ ಕಾರಿದರು.
ಮಾಜಿ ಸಂಸದ ಡಾ. ಉಮೇಶ್​ ಜಾಧವ್​ ಮಾತನಾಡಿ, ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಕೈಬಿಟ್ಟಿದ್ದರಿಂದ ಕಾಂಗ್ರೆಸ್​ ಸರ್ಕಾರ ದಿಗ್ಭ್ರಮೆಗೊಂಡಿದೆ. ತರಾತುರಿಯಲ್ಲಿ ಹಿಜಾಬ್​ ಧರಿಸಲು ಅನುಮತಿ ನೀಡಿ ಮುಸ್ಲಿಂ ಮತಗಳ ಓಲೈಕೆಗೆ ಇಳಿದಿದೆ. ಕಾಂಗ್ರೆಸ್​ಗೆ ಕೇಸರಿ ಕಂಡರೆ ಆಗುವುದಿಲ್ಲ. ದೇಶಾದ್ಯಂತ ಕಾಂಗ್ರೆಸ್​ ಮುಕ್ತ ಆಗುತ್ತಿದ್ದು, ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶವೇ ಉತ್ತಮ ಉದಾಹರಣೆ. ಕಾಂಗ್ರೆಸ್​ ಹಠಮಾರಿ ಧೋರಣೆ ಬಿಡಬೇಕು. ಇಲ್ಲದಿದ್ದರೆ ತಕ್ಕ ಪಾಠ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್​ ಬಗಲಿ ಮಾತನಾಡಿ, ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಮುಸ್ಲಿಮರ ಮತ ಸಿಕ್ಕಿಲ್ಲ ಎಂದು ಹತಾಶೆಯಿಂದ ಕಾಂಗ್ರೆಸ್​ ಪುನ@ ಹಿಜಾಬ್​ ವಿವಾದ ಮುನ್ನೆಲೆಗೆ ತಂದಿದೆ. ಮಕ್ಕಳಲ್ಲಿ ದ್ವೇಷ ಬಿತ್ತುತ್ತಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಇದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮ ಮಂದುವರಿಸಬೇಕು ಎಂದರು.
ಕೇಸರಿ ಶಾಲು ಧರಿಸುವುದಕ್ಕೆ ರ್ನಿಬಂಧ ಹೇರಿ, ಹಿಜಾಬ್​ಗೆ ಮುಕ್ತ ಅವಕಾಶ ನೀಡುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್​, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಂದ್ರ ಪಾಟೀಲ್​ ರಾಯಕೋಡ್​ ಸೇರಿ ಮಾಜಿ ಸಚಿವ ಬಾಬುರಾವ್​ ಚವ್ಹಾಣ್​ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹಾದೇವ ಬೆಳಮಗಿ, ಲಿಂಗರಾಜ ಬಿರಾದಾರ, ಯುವ ಮೋರ್ಚಾ ನಗರಾಧ್ಯಕ್ಷ ಮಹೇಶ್​ ಚವ್ಹಾಣ್​, ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ, ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ, ಶೋಭಾ ಬಾಗೇವಾಡಿ, ಸವಿತಾ ಪಾಟೀಲ್​, ಸುಶೀಲಾ ರಾಠೋಡ, ರಾಜೇಶ್ವರಿ ಮೇತ್ರೆ, ಬಂಡೆಮ್ಮ ಹಿರೇಮಠ, ನಂದಾ ಬಾಬಾ, ಜಯಶ್ರೀ ಮುಚಳಂಬಿ, ಸುನಂದಾ ಪಾಟೀಲ್​, ನಿರ್ಮಲಾ, ಸಪ್ನಾ ಮಂಗಲಗಿ, ಗಿರಿರಾಜ ಯಳಮೇಲಿ, ಶಿವ ಅಷ್ಟಗಿ, ಶಿವಕುಮಾರ್​ ಪೋಚಾಲಿ ಇತರರಿದ್ದರು.

ಮುಸ್ಲೀಂ ತುಷ್ಟೀಕರಣಕ್ಕಾಗಿ ಮುಗ್ದ ಮಕ್ಕಳ ಶೈಕ್ಷಣಿಕ ವಾತಾವರಣವನ್ನು ರಾಜ್ಯದ ಕಾಂಗ್ರೆಸ್​ ಸರ್ಕಾರ ಹಾಳು ಮಾಡುತ್ತಿದೆ. ಕಾಂಗ್ರೆಸ್​ನ ಅತೀ ತುಷ್ಟೀಕರಣದ ಕಾರಣಕ್ಕೆ ದೇಶದ ಎಲ್ಲೆಡೆ ಸೋಲುತ್ತಿದೆ. ರಾಜ್ಯದ ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣ ಬಿಟ್ಟು, ವಾಸ್ತವ ವಿಷಯ ಅರಿತು, ಅಧಿಕಾರ ನಡೆಸಬೇಕು. ಅನಗತ್ಯವಾಗಿ ಹಿಜಾಬ್​ ವಿವಾದ ತಂದಿದ್ದು, ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಿತ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

— > ಚಂದು ಪಾಟೀಲ್​, ನಗರಾಧ್ಯಕ್ಷ, ಬಿಜೆಪಿ ಕಲಬುರಗಿ

ಡಿಸಿ ಕಚೇರಿಗೆ ಮುತ್ತಿಗೆ
ಹಿಜಾಬ್​ ಆದೇಶ ವಿರೋಧಿ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ (ಡಿಸಿ) ಹಾಗೂ ಅಪರ ಜಿಲ್ಲಾಧಿಕಾರಿ (ಎಡಿಸಿ) ಬಾರದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಡುಬಿಸಿಲಿನಲ್ಲಿ ಕಾಯ್ದು ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾರಿಕೇಡ್​ಗಳನ್ನು ಸರಿಸಿ, ಪೊಲೀಸರನ್ನು ತಳ್ಳಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಡಿಸಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಬಳಿಕ, ಸ್ಥಳಕ್ಕೆ ಆಗಮಿಸಿದ ಎಡಿಸಿ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಪರಿಸ್ಥಿತಿ ತಿಳಿಗೊಳಿಸಿದರು.