ಕಲಬುರಗಿ: ವಿಧಾನ ಪರಿಷತ್ ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಕೊರಿಯರ್ ಮೂಲಕ ಚಾಕು, ಚೂರಿಯಂತಹ ಮಾರಕ ಆಯುಧ ಕಳುಹಿಸಿ ಬೆದರಿಕೆ ಹಾಕಿದವರನ್ನು ಶ್ರೀ ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಸಾಂವಿಧಾನಿಕ ಹುದ್ದೆಯಲ್ಲಿರುವ ವಿಪ ನಾಯಕನನ್ನೇ ಬೆದರಿಸಿರುವುದು ಗಂಭೀರ ವಿಚಾರ. ನಾರಾಯಣಸ್ವಾಮಿ ನಿವಾಸಕ್ಕೆ ಆಯುಧ ಕಳುಹಿಸಿದ್ದು ಸಹಿಸಲಾಗದು. ಸಣ್ಣಪುಟ್ಟ ವಿಷಯದಲ್ಲೂ ತಕ್ಷಣ ಕ್ರಮ ಕೈಗೊಳ್ಳುವ ಸರ್ಕಾರ ಇಂತಹ ಗಂಭೀರ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲ. ಕೂಡಲೇ ಬಂಧನ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಕಳುಹಿಸಿದ್ದು ಖಂಡನೀಯ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೃತ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಶಾಸಕ ಡಾ.ಅವಿನಾಶ ಜಾಧವ್, ಪಕ್ಷದ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಎಸ್ಸಿ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಸಚಿವ ಬಾಬುರಾವ ಚವ್ಹಾಣ್, ಪ್ರಮುಖರಾದ ಶರಣಪ್ಪ ತಳವಾರ, ಅಂಬಾರಾಯ ಅಷ್ಟಗಿ, ಬಸವರಾಜ ಬೆಣ್ಣೂರ, ಅವ್ವಣ್ಣ ಮ್ಯಾಕೇರಿ, ಶಿವರಾಜ ಪಾಟೀಲ್ ರದ್ದೇವಾಡಗಿ, ಶಿವಯೋಗಿ ನಾಗನಹಳ್ಳಿ, ಮಹಾದೇವ ಬೆಳಮಗಿ, ಗಂಗಪ್ಪಗೌಡ ಪಾಟೀಲ್, ವಿದ್ಯಾಧರ ಮಂಗಳೂರೆ, ಶಿವಕುಮಾರ ಪಾಟೀಲ್ ಜಂಬಗಾ, ರಾಣೋಜಿ ದೊಡ್ಮನಿ, ಸಂತೋಷ ಹಾದಿಮನಿ, ಡಾ.ಸುಧಾ ಹಾಲಕಾಯಿ, ಚಂದಮ್ಮ ಪಾಟೀಲ್, ಶಿವ ಅಷ್ಟಗಿ, ಮಹೇಶ ಚವ್ಹಾಣ್, ಪ್ರಹ್ಲಾದ್ ಮಟಮಾರಿ, ಶಿವಯೋಗಿ ನಾಗನಹಳ್ಳಿ, ಮಲ್ಲಿಕಾರ್ಜುನ ರಾಯಪ್ಪಗೌಡ, ರಾವೇಂದ್ರ ರಟಕಲ್, ವಿಜಯಕುಮಾರ ಚೇಂಗಟಿ, ಶಿವಕುಮಾರ ತೊಟ್ನಳ್ಳಿ, ಬಸವರಾಜ ಮದ್ರಕಿ ಇತರರಿದ್ದರು.
ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಸಿಡಿದೆದ್ದ ಬಿಜೆಪಿ ಮುಖಂಡರು ರಸ್ತೆ ಸಂಚಾರ ತಡೆ ನಡೆಸಿದರು. ಡಿಸಿ ಬರಲೇಬೇಕು ಎಂದು ಪಟ್ಟು ಹಿಡಿದು ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಆಗಮಿಸಿ ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.
ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ಪ್ರದರ್ಶಿಸುತ್ತಿದೆ. ವಿಧಾನ ಪರಿಷತ್ ವಿಪ ನಾಯಕರನ್ನೇ ಚಾಕು, ಚೂರಿಯಿಂದ ಬೆದರಿಸುವ ಹೀನ ಮಟ್ಟಕ್ಕೆ ಇಳಿದಿದೆ. ಇದು ಬೆಂಗಳೂರಿನ ಹಳೆಯ ರೌಡಿ ಕೋತ್ವಾಲ್ ನೀತಿ ನೆನಪಿಸುತ್ತಿದೆ. ಇಂತಹ ದಬ್ಬಾಳಿಕೆಗೆ ಬಿಜೆಪಿ ತಕ್ಕ ಉತ್ತರ ನೀಡಲಿದೆ.> ಬಸವರಾಜ ಬೆಣ್ಣೂರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಛಲವಾದಿ ನಾರಾಯಣಸ್ವಾಮಿ ಅವರನ್ನು ಹತ್ತಿಕ್ಕಲು ಕಾಂಗ್ರೆಸ್ ನಡೆಸುತ್ತಿರುವ ಷಡ್ಯಂತ್ರ ಖಂಡನೀಯ. ದಲಿತ, ಹಿಂದುಳಿದವರು ಹಾಗೂ ರೈತರ ಪರ ಧ್ವನಿ ಎತ್ತಿದ್ದರಿಂದ ಬೆದರಿಸಲಾಗುತ್ತಿದೆ. ಇಂತಹ ಗೂಂಡಾ ಸರ್ಕಾರದ ಬೆದರಿಕೆಗೆ ಬಿಜೆಪಿ ಜಗ್ಗುವುದಿಲ್ಲ. ನಾರಾಯಣಸ್ವಾಮಿ ಪರ ಇಡೀ ಪ ನಿಲ್ಲಲಿದೆ.> ಅಂಬಾರಾಯ ಅಷ್ಟಗಿ ಬಿಜೆಪಿ ಮುಖಂಡ