ಕಲಬುರಗಿ ಮಹಾನಗರ ಪಾಲಿಕೆ ಸಭೆಯಲ್ಲಿ ಬಿಜೆಪಿ ಪ್ರತಿಭಟನೆ
ಕಲಬುರಗಿ: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ತೀವ್ರ ಹೈಡ್ರಾಮಾ ನಡೆದಿದ್ದು, ನಿಗದಿತ ಸಮಯಕ್ಕೆ ಮೇಯರ್, ಪಾಲಿಕೆ ಆಯುಕ್ತರು ಹಾಗೂ ಆಡಳಿತ ಪಕ್ಷದ ಸದಸ್ಯರು ಬಾರದಿದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಸಭಾಂಗಣದ ಬಾಗಿಲು ಮುಚ್ಚಿ ಬೀಗ ಹಾಕಿ, ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಾಮಾನ್ಯ ಸಭೆಗೆ 12 ಗಂಟೆಯಾದರೂ ಮೇಯರ್ ಆಗಲಿ, ಆಯುಕ್ತರಾಗಲಿ ಸಭಾಂಗಣಕ್ಕೆ ಬರಲಿಲ್ಲ. ಈ ಬೇಜವಾಬ್ದಾರಿತನಕ್ಕೆ ರೊಚ್ಚಿಗೆದ್ದ ವಿರೋಧ ಪಕ್ಷದ ಸದಸ್ಯರು, ಸಭೆಗೆ ಬರಲು ಮನಸ್ಸಿಲ್ಲದವರಿಗೆ ಇನ್ನು ಒಳಗೆ ಬರಲು ಅವಕಾಶವೇ ಇಲ್ಲ ಎಂದು ಘೋಷಿಸುತ್ತಾ ಸಭಾಂಗಣದ ಮುಖ್ಯ ಬಾಗಿಲುಗಳನ್ನು ಮುಚ್ಚಿದರು.
ಸಭಾಂಗಣದ ಬಾಗಿಲಿಗೆ ಅಡ್ಡವಾಗಿ ಕುಂತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಹಾಗೂ ಕಾಂಗ್ರೆಸ್ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ, ಪಾಲಿಕೆಯ ಆಡಳಿತ ಯಂತ್ರ ಸಂಪೂರ್ಣ ಹಳಿ ತಪ್ಪಿದೆ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ ಹಾಗೂ ಮಾಜಿ ಮೇಯರ್ ವಿಶಾಲ್ ದರ್ಗಿ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಮಗೆ ಆಸಕ್ತಿಯಿದೆ, ಆದರೆ, ಆಡಳಿತ ಪಕ್ಷಕ್ಕೆ ಕೇವಲ ರಾಜಕಾರಣವೇ ಮುಖ್ಯವಾಗಿದೆ. ಬಾಗಿಲು ಮುಚ್ಚುವ ಮೂಲಕ ನಾವು ಸರ್ಕಾರದ ಮೌನವನ್ನು ಪ್ರಶ್ನಿಸುತ್ತಿದ್ದೇವೆ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಹಿರಿಯ ಸದಸ್ಯ ವಿಜಯಕುಮಾರ್ ಸೇವಾಲಾನಿ, ಮಲ್ಲು ಉದುನೂರು, ವೀರಣ್ಣ ಹೊನ್ನಳ್ಳಿ ಸೇರಿದಂತೆ ಹಲವರು ಭಾಗವಹಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ಘೋಷಣೆ ಕೂಗಿದರು.
* ಗೈರಾದ ಮೇಯರ್: ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಮಧ್ಯಾಹ್ನ 12 ಗಂಟೆಯಾದರೂ ಮೇಯರ್ ಹಾಗೂ ಆಯುಕ್ತರು ಗೈರುಹಾಜರಾಗಿದ್ದರು.
* ಸಭಾಂಗಣಕ್ಕೆ ಬೀಗ: ಅಧಿಕಾರಿಗಳ ಧೋರಣೆಯಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಇಂದಿರಾ ಸ್ಮಾರಕ ಭವನದ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
* ಕುರ್ಚಿ ಹೊತ್ತ ಸದಸ್ಯರು: ಪಾಲಿಕೆಯ ಪೀಠೋಪಕರಣಗಳು ಕೋರ್ಟ್‌ನಿಂದ ಮುಟ್ಟುಗೋಲಾಗಿದ್ದನ್ನು ವ್ಯಂಗ್ಯವಾಡಲು ಮಾಜಿ ಮೇಯರ್ ವಿಶಾಲ್ ದರ್ಗಿ ಹಾಗೂ ಸಚಿನ್ ಕಡಗಂಚಿ ಪ್ಲಾಸ್ಟಿಕ್ ಕುರ್ಚಿ ಹೊತ್ತು ಬಂದು ಆಕ್ರೋಶ ವ್ಯಕ್ತಪಡಿಸಿದರು.