ಚಿಂಚೋಳಿ: ತಾಲೂಕಿನ ಸುಕ್ಷೇತ್ರ ಚಂದನಕೇರಾ ಗ್ರಾಮದ ಶ್ರೀ ಬೃಂಗೀಶ್ವರ ಸಂಸ್ಥಾನ 108 ಕಟ್ಟಿಮಠದ 11 ನೇ ಜಾತ್ರಾ ಮಹೋತ್ಸವ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ಲಿಂ. ಶ್ರೀ ಷ.ಬ್ರ ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ನಿಮಿತ್ತ ಏ.1 ರಂದು ಬೃಂಗಿಶ್ರೀ ಹಾಗೂ ಚಂದನ ಸುಗಂಧ ಪ್ರಶಸ್ತಿ ಪ್ರಧಾನ ಸಮಾರಂಭವು ಸಾಯಂಕಾಲ 7ಕ್ಕೆ, ಮತ್ತು ವಿವಿಧ ಶಾಲಾ ಮಕ್ಕಳಿಗೆ ರಂಗೋಲಿ ಸ್ಪರ್ಧೆ ಸಾ. 4ಕ್ಕೆ ಹಾಗೂ ಪುರಾಣ ಮಹಾ ಮಂಗಲ ಮತ್ತು ಶ್ರೀಮಠದ ಶಿಷ್ಯಭಕ್ತರಿಗೆ ಶ್ರೀಗಳಿಂದ ಗರುರಕ್ಷೆ ಕಾರ್ಯಕ್ರಮ ಜರುಗಲಿದೆ.
ಹಿರೇ ಜೇವರ್ಗಿ ಶ್ರೀಮಠದ ಬಾಲ ಶಿವಯೋಗಿ ಲಿಂ. ಶ್ರೀ ಷ.ಬ್ರ ಗುರುಶಾಂತಲಿಂಗೇಶ್ವರ ಶಿವಾಚಾರ್ಯರ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾಂಬಸಲಗರ ಹಿರೇಮಠದ ಪೂಜ್ಯ ತಪೋರತ್ನ ದ್ವಿತೀಯ ಸಾಂಬ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸುವರು. ಬೃಂಗೀಶ್ವರ ಸಂಸ್ಥಾನ 108 ಕಟ್ಟಿಮಠದ ಪರಮ ಪೂಜ್ಯ 108 ಷ.ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವವಹಿಸುವರು. ಶರಣಬಸವೇಶ್ವರ ಸಂಸ್ಥಾನದ ಡಾ. ಲಿಂಗರಾಜ ಅಪ್ಪಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಜಿ ಸಂಸದ ಡಾ. ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಶಿವಕಾಂತ ಮಹಾಜನ, ರವಿರಾಜ ಕೊರವಿ, ಮಹೇಂದ್ರಕರ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ : ಚಂದನಕೇರಾ ಶ್ರೀಮಠವು ಕಳೆದ 11 ವರ್ಷಗಳಿಂದ ಕೊಡ ಮಾಡುವ ಪ್ರತಿಷ್ಠಿತ ಬೃಂಗಿಶ್ರೀ ಪ್ರಶಸ್ತಿಯು ಆಳಂದ ತಾಲೂಕಿನ ನಳಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗುರುಶಾಂತಪ್ಪ ಎಸ್. ಅಕ್ಕಾ ಅವರಿಗೆ ಪ್ರಧಾನ ಮಾಡಲಿದ್ದಾರೆ.
ಚಂದನ ಸುಗಂಧ ಪ್ರಶಸ್ತಿಯು ವೈದ್ಯಕೀಯ ಕ್ಷೇತ್ರ ಡಾ. ಬಸವೇಶ ವೈ. ಪಾಟೀಲ್, ಸಾಮಾಜಿಕ ಕ್ಷೇತ್ರ ಭೀಮರಾವ ತೇಗಲತೀಪ್ಪಿ, ಪತ್ರಿಕೋದ್ಯಮ ಕ್ಷೇತ್ರ ಶಿವರಾಜ ವಾಲಿ, ಸಾಮಾಜಿಕ ಕ್ಷೇತ್ರ ಅರುಣಕುಮಾರ ತಡಕಲ್, ಶಿಕ್ಷಣ ಕ್ಷೇತ್ರ ಆನಂದಕುಮಾರ ಕುಲಕರ್ಣಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.