ಕಲಬುರಗಿ: ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ನಿಮಿತ್ತ ನಗರದ ಜಗತ್ ವೃತ್ತದಲ್ಲಿನ ಶ್ರೀ ಬಸವೇಶ್ವರರ ಮೂರ್ತಿಗೆ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರ ಎಸ್.ಬಿ.ಪಾಟೀಲ್ ಗ್ರೂಪ್ ನಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ಸೋಮವಾರ ಬೆಳಗ್ಗೆ ಜಿಲ್ಲಾ ಬಸವಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತದಿಂದ ಹಮ್ಮಿಕೊಂಡ ಜಯಂತ್ಯುತ್ಸವದಲ್ಲಿ ಷಟಸ್ಥಲ ಧ್ವಜಾರೋಹಣ, ಬಸವಣ್ಣನವರ ಮೂರ್ತಿಗೆ ನಮನಗಳನ್ನು ಸಲ್ಲಿಸಿದ ನಂತರ ಒಟ್ಟು ಮೂರು ಸುತ್ತು ಪುಷ್ಪವೃಷ್ಟಿಗೈಯಲಾಯಿತು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅವರು ಹೆಲಿಕಾಪ್ಟರ್ ನಲ್ಲಿ ಆಗಮಿಸಿ, ಬಸವೇಶ್ವರರಿಗೆ ಪುಷ್ಪವೃಷ್ಟಿಗೈಯಲಾಯಿತು.
ಶ್ರೀ ಶರಣಬಸವೇಶ್ವರರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಪುಷ್ಪವೃಷ್ಟಿಯಾಗುತ್ತಲೇ ಪುತ್ಥಳಿ ಬಳಿ ಬಸವೇಶ್ವರರ ಜೈಕಾರ ಮೊಳಗಿಸಿದರು.
ಪುತ್ಥಳಿಯ ಬಳಿ, ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶಾಸಕರಾದ ಬಿ.ಆರ್.ಪಾಟೀಲ್, ಬಿ.ಜಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಶಶೀಲ ನಮೋಶಿ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ, ಎಡಿಸಿ ರಾಯಪ್ಪ ಹುಣಸಗಿ, ಕೃಷಿ ಜೆಡಿ ಸಮದ್ ಪಟೇಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಆರ್.ಜಿ.ಶೆಟಗಾರ, ರವೀಂದ್ರ ಶಾಬಾದಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.