ಕಲಬುರಗಿ: ಭಾರತೀಯ ರೈಲ್ವೆಯು, ಎಸ್ಎಂವಿಟಿ ಬೆಂಗಳೂರು ಮತ್ತು ಬೀದರ್ ಮಧ್ಯೆ ಸಂಚರಿಸುತ್ತಿದ್ದ ದ್ವಿ-ವಾರದ ವಿಶೇಷ ರೈಲನ್ನು ಕಾಯಂಗೊಳಿಸಿ ಆದೇಶ ಹೊರಡಿಸಿದೆ.
ಹಿಂದೆ ವಿಶೇಷ ರೈಲು ಸಂಖ್ಯೆ 06539/06540 ಆಗಿ ಸಂಚರಿಸುತ್ತಿದ್ದ ಸೇವೆ ನಿತ್ಯ ಸಂಚರಿಸಲಿದೆ. ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16559 ಮೇ 15 ರಿಂದ ಜಾರಿಗೆ ಬರಲಿದೆ. ಬೀದರ್ನಿಂದ ಹೊರಡುವ ರೈಲು 16560 ಮೇ 16 ರಿಂದ ಕಾಯಂ ಸೇವೆಯಾಗಿ ಲಭ್ಯವಿರಲಿದೆ.
ರೈಲು ಸಂಖ್ಯೆ 16559: ಪ್ರತಿ ಶುಕ್ರವಾರ ಮತ್ತು ಭಾನುವಾರ ರಾತ್ರಿ 9.15ಕ್ಕೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಹೊರಟು, ಮರುದಿನ ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ. ರೈಲು 16560 ಪ್ರತಿ ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2ಕ್ಕೆ ಬೀದರ್ನಿಂದ ಹೊರಟು, ಮರುದಿನ ಮುಂಜಾನೆ 4ಕ್ಕೆ ಬೆಂಗಳೂರನ್ನು ತಲುಪಲಿದೆ. ರೈಲು ಹುಮನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ರಾಯಚೂರು, ಮಂತ್ರಾಲಯಂ ರೋಡ್, ಗುಂತಕಲ್ ಹಾಗೂ ಧರ್ಮವರಂ ಮಾರ್ಗವಾಗಿ ಸಂಚರಿಸಲಿದೆ.
ಸೋಲಾಪುರ ವಿಭಾಗದ ಕಲಬುರಗಿ, ಶಹಾಬಾದ್ ಮತ್ತು ವಾಡಿ ನಿಲ್ದಾಣಗಳ ಪ್ರಯಾಣಿಕರಿಗೆ ಈ ನಿರ್ಧಾರ ವರದಾನವಾಗಲಿದೆ. ವಾರಾಂತ್ಯದಲ್ಲಿ ಬೆಂಗಳೂರಿಗೆ ತೆರಳುವ ಉದ್ಯೋಗಿಗಳು, ರಾಜಧಾನಿಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಧಾರ್ಮಿಕ ಯಾತ್ರಾರ್ಥಿಗಳಿಗೆ ಕಾಯಂ ಸೇವೆ ಸಹಕಾರಿಯಾಗಲಿದೆ. 20 ಕೋಚ್ಗಳನ್ನು ಹೊಂದಿರುವ ರೈಲಿನಲ್ಲಿ ಎಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳಿದ್ದು, ಎಲ್ಲ ವರ್ಗದ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಲಾಗಿದೆ.