ಕಲಬುರಗಿ

ಆರೋಗ್ಯಕರ ಜೀವನಕ್ಕೆ ಆಯುರ್ವೇದ ಸಾಂಪ್ರದಾಯಿಕ ಆಹಾರ ಸಂಸ್ಕೃತಿ ಅಗತ್ಯ : ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ

ಕಲಬುರಗಿ: ಆಯುರ್ವೇದವು ಕೇವಲ ಒಂದು ಚಿಕಿತ್ಸಾ ಪದ್ಧತಿಯಲ್ಲ, ಅದು ನಮ್ಮ ದೈನಂದಿನ ಆಹಾರ ಮತ್ತು ಜೀವನಶೈಲಿಯ ಭಾಗವಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಮ್.ವೈ. ಪಾಟೀಲ ಅವರು ಹೇಳಿದರು.

ಬುಧುವಾರ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ "ಆರೋಗ್ಯಕರ ನಾಳೆಗಳಿಗಾಗಿ ಆಯುರ್ವೇದ" ಈ ವರ್ಷದ ಘೋಷವಾಕ್ಯವನ್ನೊಳಗೊಂಡ "11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ" ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ, ವಿಶೇಷವಾಗಿ ಉತ್ತರ ಕರ್ನಾಟಕದ ರೊಟ್ಟಿ ಮತ್ತು ತರಕಾರಿ ಒಳಗೊಂಡ ಆಹಾರ ಪದ್ಧತಿ ಅತ್ಯಂತ ಪೌಷ್ಟಿಕ ಹಾಗೂ ಆರೋಗ್ಯಕರವಾಗಿದೆ. ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಸೂಕ್ತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸಲು, 'ಏನು ತಿನ್ನಬೇಕು ಮತ್ತು ಏನು ತಿನ್ನಬಾರದು' ಎಂಬುದನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಲು ಆಯುಷ್ ಇಲಾಖೆಯ ಉನ್ನತಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಾರುಕಟ್ಟೆಯಲ್ಲಿ ಸಿಗುವ ಅನಗತ್ಯ ಬೇಕರಿ ಉತ್ಪನ್ನಗಳು, ಚಿಪ್ಸ್, ಚಾಕೊಲೇಟ್ ಹಾಗೂ ಜಂಕ್ ಫುಡ್ ಸಂಸ್ಕೃತಿಯಿಂದ ದೂರವಿದ್ದು, ನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಅನುಗುಣವಾಗಿ ಆಹಾರ ಸೇವನೆ, ವ್ಯಾಯಾಮ, ಧ್ಯಾನ ಹಾಗೂ ಕನಿಷ್ಠ 14 ಗಂಟೆಗಳ ಕಾಲ ಅಂತರವಿರುವ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದ ಅವರು ಆಶಾ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಮತ್ತು ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವಲ್ಲಿ ವಹಿಸುತ್ತಿರುವ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಆಯುಷ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿ, ಆಯುರ್ವೇದವು ಕೇವಲ ವೈದ್ಯಕೀಯ ಪದ್ಧತಿಯಷ್ಟೇ ಅಲ್ಲದೆ, ಅದು ನಮ್ಮ ಸಂಪ್ರದಾಯ, ಜ್ಞಾನ ಮತ್ತು ವಿಜ್ಞಾನದಿಂದ ಸಮ್ಮಿಳಿತಗೊಂಡಿರುವ ಪರಿಪೂರ್ಣ ಜೀವನ ಕ್ರಮವಾಗಿದೆ.

ಆಯುರ್ವೇದದ ಮೂಲ ಉದ್ದೇಶ 'ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣೆ' ಅಂದರೆ ಆರೋಗ್ಯವಂತ ವ್ಯಕ್ತಿಯ ಆರೋಗ್ಯವನ್ನು ಕಾಪಾಡುವುದು ಹಾಗೂ ರೋಗಿಯ ರೋಗವನ್ನು ಗುಣಪಡಿಸುವುದು ಆಯುರ್ವೇದದ ಪ್ರಮುಖ ಧ್ಯೇಯವಾಗಿದೆ ಎಂದರು.

ಪ್ರಕೃತಿಯೊಂದಿಗೆ ಒಂದಾಗಿ ಜೀವಿಸಲು ಆಯುರ್ವೇದದಲ್ಲಿ ತಿಳಿಸಲಾಗಿರುವ ದಿನಚರ್ಯ ಮತ್ತು ಋತುಚರ್ಯ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯವಾಗಿದೆ. ಇಂದಿನ ಧಾವಂತದ ಬದುಕಿನಲ್ಲಿ ಆಯುರ್ವೇದ, ಯೋಗ ಮತ್ತು ಪ್ರಾಣಾಯಾಮಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಜವಾಬ್ದಾರಿ ವೈದ್ಯಾಧಿಕಾರಿಗಳು ಹಾಗೂ ನಾಗರಿಕರ ಮೇಲಿದೆ ಎಂದು ಹೇಳಿದರು.

ದಿನದ 24 ಗಂಟೆಯಲ್ಲಿ ದೇಹದ ಅಂಗಾಂಗಗಳ ಕಾರ್ಯವೈಖರಿ

ಸೆಂಟ್ ಜಾನ್ ಅಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಮಲ್ಲಾರಾವ್ ಮಲ್ಲೆ ಮಾತನಾಡಿ, ಮಾನವ ದೇಹದ ಆರೋಗ್ಯವು ನಾವು ಪಾಲಿಸುವ ಸಮಯ ಮತ್ತು ಜೀವನಶೈಲಿಯನ್ನು ಅವಲಂಬಿಸಿದ್ದು, ದೇಹದಲ್ಲಿರುವ 12 ಪ್ರಮುಖ ಅಂಗಾಂಗಗಳು 24 ಗಂಟೆಗಳಲ್ಲಿ ತಲಾ ಎರಡು ಗಂಟೆಗಳ ಕಾಲ ವಿಶೇಷವಾಗಿ ಸಕ್ರಿಯವಾಗಿರುತ್ತವೆ.

ಬೆಳಿಗ್ಗೆ 3 ರಿಂದ 5 ರ ಬ್ರಹ್ಮ ಮುಹೂರ್ತ ಶ್ವಾಸಕೋಶದ ಆರೋಗ್ಯಕ್ಕೆ ಸೂಕ್ತವಾಗಿದ್ದರೆ, ಬೆಳಿಗ್ಗೆ 7 ರಿಂದ 9 ಗಂಟೆಯೊಳಗೆ ಉಪಹಾರ ಸೇವಿಸುವುದರಿಂದ ಮಧುಮೇಹ ಮತ್ತು ಗ್ಯಾಸ್ಟ್ರೈಟಿಸ್ ತಡೆಯಬಹುದು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೃದಯ ಮತ್ತು ಮೆದುಳು ಚುರುಕಾಗಿರುವುದರಿಂದ ಪ್ರಮುಖ ಕೆಲಸಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸುವುದು ಸೂಕ್ತ.

ಮಧ್ಯಾಹ್ನ 1 ರಿಂದ 3 ಗಂಟೆಯ ಅವಧಿಯಲ್ಲಿ ದೇಹದಲ್ಲಿ ಗರಿಷ್ಠ ಇನ್ಸುಲಿನ್ ಉತ್ಪತ್ತಿಯಾಗುವುದರಿಂದ ಆ ಸಮಯದಲ್ಲಿ ಮಧ್ಯಾಹ್ನದ ಊಟ ಮಾಡುವುದು ಜೀರ್ಣಕ್ರಿಯೆಗೆ ಮತ್ತು ಆರೋಗ್ಯಕ್ಕೆ ಅತ್ಯಂತ ಹಿತಕರ ಎಂದು ಅವರು ವಿವರಿಸಿದ್ದಾರೆ. ಸರಿಯಾದ ಸಮಯಕ್ಕೆ ಆಹಾರ ಮತ್ತು ವಿಶ್ರಾಂತಿ ಪಡೆಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿವರವಾಗಿ ಹೇಳಿದರು.

ಕಲಬುರಗಿಯ ಶ್ರೀ ಬಸವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಸಶಾಸ್ತ್ರ ಹಾಗೂ ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕಿ ಡಾ. ಜಯಲಕ್ಷಿ ಹಾಗೂ ಸಹ ಪ್ರಾಧ್ಯಾಪಕಿ ಡಾ. ಸಹನಾ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಿ.ಎಚ್.ಓ ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಆಯುಷ್ ಇಲಾಖೆಯ ವಿವಿಧ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಅರುಂಧತಿ ನಿರೂಪಿಸಿದರು. ಜಿಲ್ಲಾ ಆಯುಷ್ (ಪ್ರಭಾರ) ಅಧಿಕಾರಿ ಡಾ. ರವೀಂದ್ರ ಸಿ. ಹೂಗಾರ ಸ್ವಾಗತಿಸಿದರು. ಡಾ. ರಾಜೇಶ್ವರಿ ವಂದಿಸಿದರು.