cylinders gas 
ಕಲಬುರಗಿ

ವಾಣಿಜ್ಯ ಸಿಲೆಂಡರ್​ ಕೃತಕ ಅಭಾವ ಸೃಷ್ಟಿ: ಹೊಟೇಲ್​ ಮಾಲೀಕರ ಹಾಹಾಕಾರ

ಕಲಬುರಗಿ: ಯುದ್ಧದ ಭೀತಿಯ ನೆಪದಲ್ಲಿ ವಾಣಿಜ್ಯ ಗ್ಯಾಸ್​ ಸಿಲೆಂಡರ್​ಗಳ ಪೂರೈಕೆಯನ್ನು ಹೊಟೇಲ್​, ಬೇಕರಿ ಉದ್ಯಮಿಗಳಿಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದು, ರಾಜ್ಯದ ಸಚಿವರು ಶೇ.70 ಗ್ಯಾಸ್​ ಪೂರೈಸಲಾಗುತ್ತಿದೆ ಎನ್ನುತ್ತಿದ್ದು, ಒಂದೇ ಒಂದು ಗ್ಯಾಸ್​ ಸಿಲೆಂಡರ್​ ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಆಡಳಿತದಲ್ಲಿರುವವರು ಕ್ರಮ ಕೈಗೊಳ್ಳಬೇಕು ಎಂದು ಹೋಟೆಲ್​ ಬೇಕರಿ ವಸತಿ ಗೃಹ ಮಾಲೀಕರ ಸಂದ ರಾಜ್ಯ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಆಗ್ರಹಿಸಿದರು.
ಹೊಟೇಲ್​, ಬೇಕರಿ ಉದ್ಯಮಗಳು ಕಳೆದ ಒಂದು ತಿಂಗಳಿಂದ ನಿತ್ಯ ತೊಂದರೆ ಎದುರಿಸುವಂತಾಗಿದೆ. 1700 ರೂ.ಗೆ ದೊರೆಯುತ್ತಿದ್ದ ವಾಣಿಜ್ಯ ಸಿಲೆಂಡರ್​ ಕಾಳಸಂತೆಯಲ್ಲಿ 4300 ರೂ.ಗೆ ಪಡೆಯುವಂತಾಗಿದೆ. ಗ್ಯಾಸ್​ ಏಜೆನ್ಸಿಯವರು ದುಬಾರಿ ಹಣ ಪಡೆದು, ಕಾಳ ಸಂತೆಯಲ್ಲಿ ತಮಗೆ ಬೇಕಾದವರಿಗೆ ಗ್ಯಾಸ್​ ಸಿಲೆಂಡರ್​ ಮಾರಾಟ ಮಾಡುತ್ತಿದ್ದು, ಸಿಗಬೇಕಾದ ಅಲ್ಪ ಸ್ವಲ್ಪ ಸಿಲೆಂಡರ್​ಗಳನ್ನು ನೀಡದೇ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹೊಟೇಲ್​, ಬೇಕರಿಯವರು ಪಾಲಿಕೆ, ಕಾರ್ಮಿಕ ಇಲಾಖೆ ಅನುಮತಿ, ಎ್​ಎಸ್​ಎಸ್​ಎಐ ಪರವಾನಗಿ, ಜಿಎಸ್​ಟಿ, ತೆರಿಗೆ ಸೇರಿ ಎಲ್ಲವನ್ನು ಕಟ್ಟುತ್ತೇವೆ. ಗ್ರಾಹಕರಿಗೆ ಗುಣಮಟ್ಟದ ಆಹಾರ, ವ್ಯವಸ್ಥೆ ಕಲ್ಪಿಸುತ್ತೇವೆ. ಆದರೆ ಪ್ರಸ್ತುತ ದಿಢೀರ್​ ಎಂದು ಮೂರು ಪಟ್ಟು ಹೆಚ್ಚು ಹಣ ನೀಡಿ, ಗ್ಯಾಸ್​ ಖರೀದಿಸುವಂತಾಗಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ದೇಶಾದ್ಯಂತ ಗ್ಯಾಸ್​ ಸಿಲೆಂಡರ್​ ಸರಬರಾಜಿನಲ್ಲಿ ತೊಂದರೆ ಆಗುತ್ತಿರುವುದು ಸಹಜವಾಗಿದ್ದು, ಗ್ಯಾಸ್​ ದರ ಹೆಚ್ಚಿದ್ದರಿಂದ ಊಟ, ಉಪಹಾರಗಳಲ್ಲಿ ಸ್ವಲ್ಪ ದರ ಏರಿಕೆ ಮಾಡಲಾಗುತ್ತಿದೆ. ಆದರೆ ಗ್ಯಾಸ್​ ದರ ಬೇಕಾಬಿಟ್ಟಿ ಏರಿಸಿದರೆ ಹೊಟೇಲ್​, ಬೇಕರಿಗಳ ಉತ್ಪನ್ನಗಳ ದರವೂ ಏರಿಸಿ, ಗ್ರಾಹಕರಿಗೆ ಹೊರೆ ಹಾಕಬೇಕಾಗುತ್ತದೆ. ಸದ್ಯ ಬಾಗಿಲು ಬಂದ್​ ಮಾಡಬೇಕು, ಇಲ್ಲವೇ ತಿಂಡಿ, ತಿನಿಸುಗಳ ದರವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಬೇಕು. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡದೇ ನ್ಯಾಯಯುತವಾಗಿ ಗ್ಯಾಸ್​ ಸಿಲಿಂಡರ್​ ಪೂರೈಸಬೇಕು ಎಂದು ಕೋರಿದರು.
ಕಾನೂನಿನ ಪ್ರಕಾರ ಹೊಟೇಲ್​, ಬೇಕರಿಗಳಿಗೆ ವಾಣಿಜ್ಯ ಗ್ಯಾಸ್​ ಸಿಲೆಂಡರ್​ ಮಾಡಬೇಕು. ಇಲ್ಲದಿದ್ದರೆ ಹೊಟೇಲ್​ಗಳನ್ನು ಮುಚ್ಚಿ, ಮಾಲಿಕರು, ಕಾರ್ಮಿಕರು ಬೀದಿಗೆ ಬರುವಂತ ಸ್ಥಿತಿ ಇದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಸಮಸ್ಯೆ ಇಮ್ಮಡಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಂದ ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್​ ಮಾತನಾಡಿ, ಜಿಲ್ಲಾಡಳಿತ ವಾಣಿಜ್ಯ ಗ್ಯಾಸ್​ ಸಿಲೆಂಡರ್​ ಪೂರೈಸಲಾಗುತ್ತಿದೆ ಎನ್ನುತ್ತಾರೆ. ಆದರೆ ಮೂರು ಪಟ್ಟು ದರ ಹೆಚ್ಚಳವಾಗಿದೆ. ಹೊಟೇಲ್​ನವರಿಗೆ ವಾಣಿಜ್ಯ ಸಿಲೆಂಡರ್​ ನೀಡುತ್ತಿಲ್ಲ. ಆದರೆ ಕಾಳ ಸಂತೆಯಲ್ಲಿ ಅದೇ ಸಿಲೆಂಡರ್​ ಮಾರಾಟಕ್ಕೆ ಲಭ್ಯವಿದೆ. ಬೀದಿ ಬದಿ ವ್ಯಾಪಾರಿಗಳಿಗೆ ದೊರೆಯುತ್ತಿರುವ ಸಿಲೆಂಡರ್​ ಎಲ್ಲ ತೆರಿಗೆ, ಪರವಾನಗಿ ಇರುವ ಹೊಟೇಲ್​ನವರಿಗೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.