- 5 ಸಾವಿರ ಹಣ ಕೊಡಲು ಯತ್ನಿಸಿದ್ದ ವೇಳೆ ಬಂಧನ
ಕಲಬುರಗಿ: ಎಸ್ಸಿ, ಎಸ್ಟಿ ಪ್ರಕರಣವೊಂದರಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ನ್ಯಾಯಾಲಯದ ವಿಚಾರಣೆ ತಮ್ಮ ಪರವಾಗುವಂತೆ ಮಾಡಲು ಸರ್ಕಾರಿ ಅಭಿಯೋಜಕರಿಗೆ 5,000 ರೂ. ಲಂಚ ನೀಡಲು ಯತ್ನಿಸಿದ ತಂದೆ ಮತ್ತು ಮಗನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಳಂದ ತಾಲೂಕಿನ ಕೋತನಹಿಪ್ಪರಗಾದ ಆರೋಪಿಯ ಸಹೋದರ ಸಂಜೀವನ್ ದತ್ತಾಜಿ ಪಾಟೀಲ್(80) ಹಾಗೂ ಅವರ ಪುತ್ರ ಸುರೇಶ ಸಂಜೀವನ್ ಪಾಟೀಲ್(44) ಬಂಧಿತರು. ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಸಿ, ಎಸ್ಟಿ ಪ್ರಕರಣವೊಂದು ಕಲಬುರಗಿಯ 2ನೇ ಅಪರ ಜಿಲ್ಲಾ ಮತ್ತು ಸತ್ರ (ಎಸ್ಸಿ, ಎಸ್ಟಿ) ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಪ್ರಕರಣದಲ್ಲಿನ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಹಾಗೂ ಪ್ರಕರಣದ ವಿಚಾರಣೆ ವಿಳಂಬದ ಪ್ರಯತ್ನದ ಭಾಗವಾಗಿ ಲಂಚ ನೀಡಲು ನಿರ್ಧರಿಸಿದ್ದರು.
ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿಯೇ 5,000 ನಗದು ಹಣ ಕವರ್ನಲ್ಲಿ ನೀಡಿ ಒತ್ತಾಯಪೂರ್ವಕವಾಗಿ ಲಂಚ ನೀಡಲು ಯತ್ನಿಸಿದ್ದರು. ಈ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಲಂಚದ ಕುರಿತು ಕಲಬುರಗಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಪ್ರಾಣೇಶ ಭರತನೂರ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲಂಚದ ಹಣ ನೀಡುವ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ಸ್ಪೆಕ್ಟರ್ ಅರುಣ್ ಕುಮಾರ, ರವಿ ಪವಾರ್, ಇತರೆ ಸಿಬ್ಬಂದಿ ಭಾಗವಹಿಸಿದ್ದರು.