ಕಲಬುರಗಿ: ಮೋಟಾರ್ ಪಂಪ್ ಹಾಗೂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 60 ಸಾವಿರ ರೂ. ಮೌಲ್ಯದ ಮೂರು ಮೋಟಾರ್ ಪಂಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿತ್ತಾಪುರದ ಆಶ್ರಯ ಕಾಲನಿ ನಿವಾಸಿಗಳಾದ ಮಂಜುನಾಥ ಅಂಜನಯ್ಯ (30) ಮತ್ತು ಭೀಮಣ್ಣ (38) ಬಂಧಿತರು.
ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರದ ನಿವಾಸಿ ಸೈಯದ್ ನಸೀರ್ ಅವರು ತಮ್ಮ ಜಮೀನಿನಲ್ಲಿದ್ದ 3 ಎಚ್ಪಿ ಸಾಮರ್ಥ್ಯದ ಮೂರು ಮೋಟಾರ್ ಪಂಪ್ಗಳು ಕಳ್ಳತನವಾದ ಬಗ್ಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಉಪಾಧೀಕ್ಷಕ ಶಂಕರಗೌಡ ಪಾಟೀಲ್ ಹಾಗೂ ವೃತ್ತ ನಿರೀಕ್ಷಕ ಎಸ್.ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸಿದೆ.
ಬಂಧಿತರಿಂದ ಮೂರು ಮೋಟಾರ್ ಪಂಪ್ ಸೇರಿ ಒಟ್ಟು 60 ಸಾವಿರ ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.