ಅಫಜಲಪುರ: ಭೈರಾಮಡಗಿ ಗ್ರಾಮದ ಮಹಾಂತೇಶ್ವರ ಮಠ ದುಧನಿಯ ಶ್ರೀ ಗುರು ಶಾಂತಲಿಂಗೇಶ್ವರ ಮಠದ ಶಾಖಾ ಮಠವಾಗಿದ್ದು, ಅಲ್ಲಿನ ಪರಂಪರೆ ನಿರ್ಧಾರ ತೆಗೆದುಕೊಳ್ಳುವುದು ನಮಗೆ ಸಂಬಂಧಿಸಿದ್ದಾಗಿದೆ. ಜತೆಗೆ ಮಠದ ವಿಚಾರ ಕೋರ್ಟ್ನಲ್ಲಿರುವಾಗ ಕೆಲವರು ಏಕಾಏಕಿ ಷಡರಿ ಎಂಬುವರಿಗೆ ಪಟ್ಟಾಧಿಕಾರ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ದುಧನಿಯ ಗುರು ಶಾಂತಲಿಂಗೇಶ್ವರ ಮಠದ ಶ್ರೀ ಡಾ.ಶಾಂತಲಿಂಗೇಶ್ವರ ಸ್ವಾಮಿಗಳು ದೂರಿದರು.
ದುಧನಿಯ ಶ್ರೀ ಗುರು ಶಾಂತಲಿಂಗೇಶ್ವರ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಭೈರಾಮಡಗಿ ಮಠದ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು, ಭೈರಾಮಡಗಿ ಶಾಖಾ ಮಠದ ಮೊದಲಿನ ಗುರುಗಳು 2015ರಂದು ಲಿಂಗೈಕ್ಯರಾಗಿದ್ದಾರೆ. ಮುಂದೆ ಉತ್ತರಾಧಿಕಾರಿ ನೇಮಕ ಮಾಡಲು ಸಂಪೂರ್ಣ ಜವಾಬ್ದಾರಿಯಿದೆ. ಅಲ್ಲಿನ ಕೆಲವರು ಮಠದ ಆಸ್ತಿ ಕಬಳಿಸಲು ಬೇರೊಬ್ಬರನ್ನು ಸ್ವಾಮಿಜಿಯನ್ನಾಗಿ ನೇಮಕ ಮಾಡಿದ್ದಾರೆ ಎಂಬ ಮಾಹಿತಿ ಇತ್ತೀಚೆಗೆ ತಿಳಿಯಿತು. ಇದಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದರು.
ಶ್ರೀಮಠದ ವಿಚಾರ ಕೋರ್ಟ್ನಲ್ಲಿದೆ. ಯಾವುದೇ ಕೆಲಸಗಳು ಆಗದಂತೆ ತಾತ್ಕಾಲಿಕ ತಡೆಯಾೆ ನ್ಯಾಯಾಲಯ ನೀಡಿದೆ. ಹೀಗಿರುವಾಗ ಉತ್ತರಾಧಿಕಾರಿ ನೇಮಕ ಮಾಡಿ ಪಟ್ಟಾಧಿಕಾರ ಮಾಡಿರುವುದು ಕೋರ್ಟ್ ಆದೇಶ ಉಲ್ಲಂನೆ ಮಾಡಿದಂತಾಗಿದೆ. ಇದನ್ನು ದುಧನಿ ಮೂಲಪೀಠದ ಎಲ್ಲ ಶಾಖಾ ಮಠದ ಶ್ರೀಗಳನ್ನು ಖಂಡಿಸಿದ್ದಾರೆ. ಹೀಗಾಗಿ ಇದೀಗ ನೇಮಕವಾಗಿರುವ ಶ್ರೀಗಳಿಗೂ ದುಧನಿ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂಧು ಹೇಳಿದರು.
ಶಿವಣ್ಣ ಚಾಳಿಕರ, ಮಹಾಂತೇಶ ಪಾಟೀಲ್, ಸುಭಾಷ ಪರಮಶೆಟ್ಟಿ, ಯಶವಂತರಾವ ಬಿರಾದಾರ, ಬಸಣ್ಣ ಹಿರೇಗೌಡ, ಪ್ರೇಮನಾಥ ಜಮದಿ, ಶಿವಣ್ಣ ಚಾಳಿಕರ, ಬಸವರಾಜ ಅಂಕಲಗಿ ಇದ್ದರು.