ಕಲಬುರಗಿ: ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಪಟ್ಟಿ ಹೊರಬಿದ್ದಿದ್ದು, ಕಲಬುರಗಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ದೊರಕಿದ್ದು, ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ದೊರಕಿದೆ.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಅಜಯ ಧರ್ಮಸಿಂಗ್ ಪಕ್ಷ ನಿಷ್ಠೆಗೆ ಸಚಿವ ಸ್ಥಾನ ಒಲಿದು ಬಂದಿದೆ.
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಡಾ.ಅಜಯಸಿಂಗ್, ನಂತರ ಜೇವರ್ಗಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ನಿರಂತರವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದರು.
ಪಕ್ಷದ ಮುಖ್ಯ ಸಚೇತಕರಾಗಿ, ಕೆಕೆಆರ್ ಡಿಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಪುತ್ರನಾಗಿ ರಾಜಕೀಯ ಜೀವನ ಆರಂಭಿಸಿದ ಡಾ.ಅಜಸಿಂಗ್ ತಂದೆ ಸಾಗಿದ ದಾರಿಯಲ್ಲೆ ಜೇವರ್ಗಿಯಲ್ಲಿ ಶಾಸಕರಾಗಿ ಕೆಲಸ ಮಾಡಿ, ಜನಮನ್ನಣೆ ಗಳಿಸಿದರು. 2013ರಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರೂ ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದರು.
ವಿಜಯೋತ್ಸವ: ಸಚಿವ ಸ್ಥಾನ ಖಚಿತವಾಗುತ್ತಲೇ ಬೆಂಗಳೂರಿನ ಧರ್ಮಸಿಂಗ್ ಮನೆಯಲ್ಲಿ ಬೆಂಬಲಿಗರು ಹರ್ಷೋತ್ಸವ ಆಚರಿಸಿದರು. ತಾಯಿ ಪ್ರಭಾವತಿ ಧರ್ಮಸಿಂಗ್ ಅವರು, ಪಕ್ಷದ ಹಿರಿಯರ ಆಶೀರ್ವಾದ ಪಡೆದರು.