- ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಕಿಡಿ
- ಬರ ಪರಿಹಾರ ಕಾಮಗಾರಿ ವೇಗಕ್ಕೆ ಮನವಿ
ಕಲಬುರಗಿ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಕೃಷಿಕರು ಬೀದಿಗೆ ಬಂದಿದ್ದಾರೆ. ತಕ್ಷಣ ಸರ್ಕಾರ ರೈತರಿಗೆ ಎಕರೆ ಜಮೀನಿಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ 30 ಲಕ್ಷ ಹೆಕ್ಟೇರ್ ಪೈಕಿ ಶೇ.15 ರಿಂದ 20 ಮಾತ್ರ ಬಿತ್ತನೆಯಾಗಿದೆ. ಗಂಭೀರ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಲು ಕೃಷಿ ಸಚಿವರೇ ಇಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾದರೂ ಸಂಪುಟ ವಿಸ್ತರಿಸದೇ ಕಾಲಹರಣ ಮಾಡುತ್ತಿದ್ದು, ಮುಖ್ಯಮಂತ್ರಿಗಳು ೋಟೋಶೂಟ್ಗಾಗಿ ಕಲ್ಯಾಣ ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ನಾಯಕರಿಗೆ ಕತ್ತೆ ಕಾಯುವ ಕೆಲಸ ಬಿಟ್ಟು ರೈತರ ಕಣ್ಣೀರು ಒರೆಸಲು ಸಾಧ್ಯವಾಗುತ್ತಿಲ್ಲವೇ? ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕಾಳಜಿಯೇ ಇಲ್ಲ. ಕಾಟಾಚಾರಕ್ಕೆ ಕಲಬುರಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬಂದೆ ಪುಟ್ಟ, ಹೋದೆ ಪುಟ್ಟ' ರಾಜಕಾರಣದಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಅಕ್ರಮ ನಿವಾಸಿಗಳಿಗೆ ಕಾನೂನುಬಾಹಿರವಾಗಿ ವಾಸಸ್ಥಳ ಪ್ರಮಾಣಪತ್ರ ನೀಡುವ ಮೂಲಕ ಕಾಂಗ್ರೆಸ್ ದುಸ್ಸಾಹಸ ಮಾಡುತ್ತಿದೆ ಎಂದರು.
ಮಾಜಿ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಶೈಲೇಂದ್ರ ಡಾ.ಬೆಲ್ದಾಳೆ, ಡಾ.ಅವಿನಾಶ ಜಾಧವ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲ್, ಅರುಣ ಶಹಾಪುರ, ಜಿಲ್ಲಾಧ್ಯಕ್ಷರಾದ ಚಂದು ಪಾಟೀಲ್, ಅಶೋಕ್ ಬಗಲಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಪ್ರಮುಖರಾದ ಅವ್ವಣ್ಣ ಮ್ಯಾಕೇರಿ, ನಿತೀನ್ ಗುತ್ತೇದಾರ, ಶಿವರಾಜ ಪಾಟೀಲ್ ರದ್ದೇವಾಡಗಿ, ಶರಣಪ್ಪ ತಳವಾರ, ಬಸವರಾಜ ಬೆಣ್ಣೂರಕರ್, ಹರ್ಷಾನಂದ ಗುತ್ತೇದಾರ, ಸಂತೋಷ ಹಾದಿಮನಿ, ಆನಂದ ಪಾಟೀಲ್ ಕೊರಳ್ಳಿ, ನಾಗರಾಜ ಮಹಾಗಾಂವಕರ, ಬಾಬುರಾವ ಹಾಗರಗುಂಡಗಿ ಇತರರಿದ್ದರು.