andola siddaling swamiji 
ಕಲಬುರಗಿ

ಪೊಲೀಸ್ ಠಾಣೆಗಳು ಡೀಲ್ ಕೇಂದ್ರ: ಆಂದೋಲ ಸಿದ್ದಲಿಂಗ ಶ್ರೀ ಕಿಡಿ

ಪ್ರಮುಖ ಮುಖ್ಯಾಂಶಗಳು

  • ಆರೋಪಿಗಳಿಂದ ಪೊಲೀಸರು ಲಂಚ ಪಡೆದ ಆರೋಪ
  • ನ್ಯಾಯಾಲಯದ ಆದೇಶವಿದ್ದರೂ ಭ್ರಷ್ಟ ಪೊಲೀಸ್​ ವಿರುದ್ಧ ಕ್ರಮ ಜರುಗಿಸದಿದ್ದಕ್ಕೆ ಕಿಡಿ
ಕಲಬುರಗಿ: ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳು ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಬದಲು ಭ್ರಷ್ಟಾಚಾರದ ಡೀಲ್ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಶಿವಸೇನಾ ಕರ್ನಾಟಕದ ಅಧ್ಯಕ್ಷರಾದ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಗಂಭೀರವಾಗಿ ಆರೋಪಿಸಿದರು.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಮತ್ತು ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡಿ ಸಮಾಜಕ್ಕೆ ಕಪ್ಪುಚುಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರಹ್ಮಪುರ ಪೊಲೀಸ್ ಠಾಣೆಯ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂದಿನ ಇನ್ಸ್‌ಪೆಕ್ಟರ್ ಸೋಮಲಿಂಗ್ ಕಿರದಳ್ಳಿ (ಪ್ರಸ್ತುತ ಡಿಎಸ್‌ಪಿ) ಅವರು ಮೂವರು ಆರೋಪಿಗಳ ವಿರುದ್ಧ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುಳ್ಳು ನೆಪವೊಡ್ಡಿ ಜಾಮೀನು ರದ್ಧತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೊಲೀಸರ ಸುಳ್ಳನ್ನು ಬಯಲು ಮಾಡಿದೆ. ತಪ್ಪಿತಸ್ಥ ಅಧಿಕಾರಿ ಸೋಮಲಿಂಗ್ ಕಿರದಳ್ಳಿ ಅವರು ಸಂತ್ರಸ್ತರಿಗೆ ತಲಾ 50 ಸಾವಿರ ರೂ. ದಂಡ ಪಾವತಿಸಬೇಕು ಮತ್ತು ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರಾದ ಮಹಮ್ಮದ್ ಮುಜೀರ್ ಉಲ್ಲಾ ಆದೇಶಿಸಿದ್ದಾರೆ ಎಂದು ಶ್ರೀಗಳು ವಿವರಿಸಿದರು.
ನ್ಯಾಯಾಲಯದ ಆದೇಶವಿದ್ದರೂ ಪೊಲೀಸ್ ಆಯುಕ್ತರು ಈವರೆಗೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣ ಮಧ್ಯಪ್ರವೇಶಿಸಿ, ನ್ಯಾಯಾಲಯದ ಆದೇಶದಂತೆ ಸೋಮಲಿಂಗ್ ಕಿರದಳ್ಳಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರ ನಕಲಿ ಸಹಿ ಬಳಸಿ 18 ಲಕ್ಷ ರು. ಬ್ಯಾಂಕ್ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಆಪ್ತರ ಕೈವಾಡವಿದ್ದು, ಬ್ರಹ್ಮಪುರ ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು.
ಗುರುಶಾಂತ ತೆಂಗಳಿ, ಸುರೇಶ್ ತಳವಾರ್, ರಾಕೇಶ್ ಜಮಾದಾರ್ ಹಾಗೂ ರೋಹಿತ್ ಪಿಸ್ಕೆ ಉಪಸ್ಥಿತರಿದ್ದರು.