- ಮಹಾಂತಗೌಡ ನಂದಿಹಳ್ಳಿ ಆರೋಪ
- ಕಣ್ಮುಚ್ಚಿ ಕುಳಿತ ಕೃಷಿ ಇಲಾಖೆ
ಕಲಬುರಗಿ: ಜಿಲ್ಲೆಯಲ್ಲಿ ರೈತರಿಗೆ ಗೊಬ್ಬರದ ಹೆಸರಿನಲ್ಲಿ ಮರಳು, ಸವಳು, ಕಲ್ಲು, ಮಣ್ಣು ಮಿಶ್ರಿತ ರಸಗೊಬ್ಬರವನ್ನು ನೀಡಿ, ಮೋಸ ಮಾಡಲಾಗುತ್ತಿದ್ದು, ಬಹುತೇಕ ಆಗ್ರೋ ಕೇಂದ್ರಗಳಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿದ್ದು, ಅದನ್ನು ಕೂಡಲೇ ತಡೆ ನೀಡಬೇಕು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಆರೋಪಿಸಿದರು.
ಜಿಲ್ಲೆಗೆ ತೆಲಂಗಾಣ, ಮಹಾರಾಷ್ಟ್ರ ಸೇರಿ ಅಕ್ಕಪಕ್ಕದ ಜಿಲ್ಲೆಗಳ ಮಾರ್ಗವಾಗಿ ಸುಮಾರು 6&7 ಸಾವಿರ ಟನ್ ಕಳಪೆ ರಸಗೊಬ್ಬರ ಬಂದಿದೆ. ಅದನ್ನೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಡಿಎಪಿ ರಸಗೊಬ್ಬರ, ಪೋಟ್ಯಾಷ, ಪಿಡಿಎಂ ಹಾಗೂ ಇತರೆ ರಸಗೊಬ್ಬರಗಳು ಕಳಪೆಯಾಗಿದ್ದರೂ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳಾಗಲಿ ಕ್ರಮ ಕೈಗೊಂಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಡಿಎಪಿ ರಸಗೊಬ್ಬರವನ್ನು ಪ್ರತಿ ಆಗ್ರೋ ಕೇಂದ್ರಗಳಲ್ಲಿ 1800 ರೂ. ಡಿಎಪಿಗೆ, 600 ರೂ. ಯೂರಿಯಾಕ್ಕೆ ವಸೂಲಿ ಮಾಡುತ್ತಿದ್ದಾರೆ. ಸುಲಿಗೆ ಮಾಡುತ್ತಿದ್ದರೂ ಕೃಷಿ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ. ಡಿಎಪಿಯಲ್ಲಿ ನೈಟ್ರೋಜನ್ 18, ಪಾಸ್ಪೆಟ್ 46 ಇರುತ್ತದೆ. ಆದರೆ ಪ್ರಸ್ತುತ ಪೂರೈಕೆ ಆಗುತ್ತಿರುವ ಡಿಎಪಿಯಲ್ಲಿ ಮರಳಿನ ಹರಳು, ಕಲ್ಲು ಚೂರು, ಸವಳಿನ ಕಣಗಳೇ ಇದ್ದು, ಮಹಾಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳ ಮಹಾಮೌನ: ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಕಳಪೆ ಬೀಜ, ರಸಗೊಬ್ಬರ ಕೊರತೆ ಇದ್ದರೂ ಜಿಲ್ಲೆಯ ಒಬ್ಬನೇ ಒಬ್ಬ ಶಾಸಕ, ಸಚಿವರು ತುಟಿ ಬಿಚ್ಚುತ್ತಿಲ್ಲ. ಎಲ್ಲರೂ ಆಗ್ರೋ ಏಜೆನ್ಸಿಗಳು, ಮಿಕ್ಸರ್ ಯೂನಿಟ್ನವರು, ರಸಗೊಬ್ಬರ, ಬೀಜ ಕಂಪನಿಗಳ ದಾಸರಂತೆ ವರ್ತಿಸುತ್ತಿದ್ದಾರೆ. ಸದ್ಯ ಕೃಷಿ ಸಚಿವರೇ ಇಲ್ಲ. ಉಸ್ತುವಾರಿ ಸಚಿವರು ಇದರ ಬಗ್ಗೆ ಮಾತನಾಡುತ್ತಿಲ್ಲ. ನಾವು ಯಾರಿಗೆ ಕೇಳಬೇಕು ಎಂದು ಪ್ರಶ್ನಿಸಿದರು.
ರೈತರಿಗೆ ಡಿಎಪಿ, ಯೂರಿಯಾ, ಪೋಟ್ಯಾಷ್, ಪಿಡಿಎಂ ಕಾಂಪ್ಲೆಕ್ಸ್ ರಸಗೊಬ್ಬರಗಳು ಎಂಆರ್ಪಿ ದರದಲ್ಲಿ ನೀಡಬೇಕು, ಕಳಪೆ ಬೀಜ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹತ್ತಿ ಬೀಜದ ಮೇಲೆ ನಿಗಾ ಇಡಬೇಕು, ಕಳಪೆ ಬೀಜ, ರಸಗೊಬ್ಬರ ಪತ್ತೆ ಹಚ್ಚುವಲ್ಲಿ ವಿಲರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದರು.
ಪ್ರಮುಖರಾದ ಮಲ್ಲಣ್ಣಗೌಡ ಪಾಟೀಲ್ ಕೆಲ್ಲೂರ, ಬಸವರಾಜ ಕೋರಿ ಮುತ್ತಗಾ, ಜಗದೇವಿ ಹೆಗಡೆ, ಗುರಣ್ಣಗೌಡ ಹಳ್ಳಿ, ಶ್ರೀದೇವಿ ನೆಲೋಗಿ, ಮಲ್ಲಿಕಾರ್ಜುನ ಚಟ್ನಾ ಇತರರಿದ್ದರು.
ಮಿಕ್ಸಿಂಗ್ ಯುನಿಟ್ ಗೋಲ್ಮಾಲ್?
ಜಿಲ್ಲೆಯಲ್ಲಿ 6ರಿಂದ 7 ರಸಗೊಬ್ಬರ ಮಿಕ್ಸಿಂಗ್ ಟಕಗಳು ಇದ್ದು, ಇಲ್ಲಿಯೇ ರಸಗೊಬ್ಬರ ಕಲಬೆರಕೆ ಮಾಡಿರುವ ಸಂಭವವಿದ್ದು, ಅಧಿಕಾರಿಗಳು ಅಲ್ಲಿನ ರಸಗೊಬ್ಬರಗಳ ಸ್ಯಾಂಪಲ್ ಪಡೆದು, ತನಿಖೆ ನಡೆಸಬೇಕು ಎಂದು ಮಹಾಂತಗೌಡ ನಂದಿಹಳ್ಳಿ ಆರೋಪಿಸಿದರು.
ಕೇಂದ್ರ ಸರ್ಕಾರ ಬಿಟಿ-1, ಬಿಟಿ-2 ಹತ್ತಿ ಬೀಜಗಳನ್ನು ಮಾತ್ರ ಮಾರಾಟ ಮಾಡಲು, ಬಿತ್ತನೆಗೆ ಅನುಮತಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಮೇಲೆ ಬಿಟಿ-1, 2 ಎಂದು ನಮೂದಿಸಿ ಪಾಕೆಟ್ ಒಳಗಡೆ ಬಿಟಿ-3, ಬಿಟಿ-4 ಕಳಪೆ ಮಟ್ಟದ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಚರ್ಮ ರೋಗ, ಅಸ್ತಮಾ, ಅಲರ್ಜಿ ಸೇರಿ ಹಲವು ಕಾಯಿಲೆ ಬರುತ್ತಿವೆ. ಬೀಜದ ತೂಕದಲ್ಲೂ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಮಹಾಂತಗೌಡ ಆರೋಪಿಸಿದರು.