ವಿಜಯವಾಣಿ ವಿದ್ಯೋತ್ಸವದಲ್ಲಿ ಜ್ನಾನ ಮಿಲನ 
ಕಲಬುರಗಿ

ಸಾಧನೆಗೆ ಸಂಸ್ಕಾರವೇ ಶಕ್ತಿ: ವಿಜಯವಾಣಿ ವಿದ್ಯೋತ್ಸವದಲ್ಲಿ ಜ್ನಾನ ಮಿಲನ

ಕಲಬುರಗಿ: ಉನ್ನತ ಶಿಕ್ಷಣದೊಂದಿಗೆ ದೊಡ್ಡ ಹುದ್ದೆ, ಸ್ಥಾನಮಾನ ಪಡೆಯಬಹುದು. ಆದರೆ ಅದಕ್ಕಿಂತ ಮುಖ್ಯವಾಗಿರುವುದು ನಮ್ಮ ನಡವಳಿಕೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ವಿಜಯವಾಣಿ ದಿನಪತ್ರಿಕೆ ಹಾಗೂ ಬೀದರ್​ ಜಿಲ್ಲೆ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ವಸತಿ ಮಹಾವಿದ್ಯಾಲಯ ಸಹಯೋಗ ಮತ್ತು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಹಕಾರದಡಿ ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿರುವ ಎರಡು ದಿನದ ವಿದ್ಯೋತ್ಸವ (ಎಜುಕೇಷನ್​ ಎಕ್ಸ್​ಪೋ)ದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಪೂಜ್ಯರು, ವ್ಯಕ್ತಿಯ ವ್ಯಕ್ತಿತ್ವ ಶುದ್ಧೀಕರಿಸಿ ಸದ್ಗುಣ ಮತ್ತು ಮಾನಸಿಕ&ಅಧ್ಯಾತ್ಮದ ಬೆಳವಣಿಗೆಗೆ ಕಾರಣವಾಗಿರುವ ಕ್ರಿಯಯೇ ಸಂಸ್ಕಾರ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದೊಂದಿಗೆ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.
ಇಂದಿನ ಮಕ್ಕಳ ಬುದ್ಧಿಮಟ್ಟ ಬಹಳಷ್ಟು ವಿಕಾಸವಾಗುತ್ತಿದ್ದರೂ ಹೃದಯ ಚಿಕ್ಕದಾಗುತ್ತಿದೆ. ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ಪಾಲಕರು, ಗುರು&ಹಿರಿಯರನ್ನು ಗೌರವದಿಂದ ಕಾಣಬೇಕು. ಭವಿಷ್ಯ ಅಂಗೈಯಲ್ಲಿಲ್ಲ, ಮುಂಗೈಯಲ್ಲಿ ಇದೆ. ನಮ್ಮೊಳಗಿನ ಶಕ್ತಿಯನ್ನು ಬಳಸಿಕೊಳ್ಳಿ. ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತಾಗಲಿದೆ ಎಂದು ತಿಳಿಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ವಿದ್ಯೋತ್ಸವಕ್ಕೆ ಚಾಲನೆ ನೀಡಿದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರಾದ ಯುವ ಉದ್ಯಮಿ ಚಂದು ಪಾಟೀಲ್​ ಅಧ್ಯಕ್ಷತೆ ವಹಿಸಿದ್ದರು. ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ., ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್​.ಆರ್​. ಬಿರಾದಾರ್​, ವಿವಿಧ ಶಿಣ ಸಂಸ್ಥೆಗಳ ಪ್ರಮುಖರಾದ ನಿತಿನ್​ ನಾಯ್ಕ್​, ಶಿವಾನಂದ ಖಜೂರಿ ಇದ್ದರು.
ಸಾಕ್ಷಿ, ರಮೇಶ ಬಡಿಗೇರ, ಮೌನೇಶ್​ ವಿಶ್ವಕರ್ಮ ತಂಡ ಪ್ರಾರ್ಥನೆ ನಡೆಸಿಕೊಟ್ಟಿತು. ಸ್ಥಾನಿಕ ಸಂಪಾದಕ ಬಾಬುರಾವ್​ ಯಡ್ರಾಮಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಮೇಳಕುಂದಾ ಸ್ವಾಗತಿಸಿದರು. ಆರ್​ಜೆ ಮಂಜು ಹಿರೋಳಿ ನಿರೂಪಣೆ ಮಾಡಿದರು.