basava jaynthi 
ಕಲಬುರಗಿ

ಬಸವಾಭಿಮಾನಿಗಳ ಒಗ್ಗಟ್ಟು, ಶಕ್ತಿ ಸಂದೇಶ: ಕಲಬುರಗಿಯಲ್ಲಿ ಬಸವ ಜಯಂತಿ

ಕಲಬುರಗಿ: ಗೋದೂಳಿಯ ಶುಭ ಳಿಗೆಯಲ್ಲಿ ಸಹಸ್ರಾರು ಬಸವಾಭಿಮಾನಿಗಳ ಸಮ್ಮಿಲನ, ಬಸವ ಜೈಘೋಷಣೆ, ಎಲ್ಲೆಡೆ ರಾರಾಜಿಸಿದ ಷಟಸ್ಥಲ ಧ್ವಜಗಳು, ಮಳೆಯ ತುಂತುರು ಸಿಂಚನದ ಮಧ್ಯೆ ಬಸವಾದಿ ಶರಣರ ಜೀವನ ಸಂದೇಶದ ಕುರಿತು ಗಣ್ಯರು, ಅನುಭಾವಿಗಳು ಪೂಜ್ಯರ ಹಿತವಚನದೊಂದಿಗೆ ನಗರದಲ್ಲಿ ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟಿನ ಪ್ರದರ್ಶನ, ಶಕ್ತಿಯ ಸಂದೇಶದ ಅನುರಣನ...
ಬಸವ ಜಯಂತಿ ನಿಮಿತ್ತ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಬೃಹತ್​ ಬಸವಾಭಿಮಾನಿಗಳ ಸಮಾವೇಶದಲ್ಲಿ ಕಂಡು ಬಂದ ದೃಶ್ಯವಿದು.
ಲಿಂ.ಡಾ.ಶರಣಬಸವಪ್ಪ ಅಪ್ಪ ವೇದಿಕೆಯಲ್ಲಿ ಬಸವೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಬಸವ ಗುರುವಿನ ಮಾರ್ಗದರ್ಶನದಲ್ಲಿ ಎಲ್ಲ ಅತಿಥಿ ಅಭ್ಯಾಗಥರು ವೇದಿಕೆಯ ಮುಂಭಾಗದಲ್ಲಿ ಕುಳಿತು, ಸಮಾನತೆಯ ಸಂದೇಶವನ್ನು ಸಾರಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಅವರು ಆಶೀರ್ವಚನ ನೀಡಿ, ಶರಣ ತತ್ವಗಳ ಪ್ರಸಾರ ಹೆಚ್ಚಬೇಕಿದೆ. ಆತ್ಮಶುದ್ಧಿಗೆ ಇಷ್ಟಲಿಂಗ ಪೂಜೆ ಪೂರಕ ಎಂದು ಹೇಳಿದರು.
ಅರಣ್ಯ ಸಚಿವ, ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಗುರುಕುಮಾರೇಶ್ವರರು ಸ್ಥಾಪಿಸಿದ ಮಹಾಸಭೆಗೆ ಇದೀಗ 123 ವರ್ಷವಾಗಿದ್ದು, ಸಮಾಜದ ಗಣ್ಯಮಾನ್ಯರು, ಪೂಜ್ಯರು ಸಮಾಜವನ್ನು ಕಟ್ಟಿ ಬೆಳೆಸಿದ್ದು, ಮಹತ್ವದ ಜವಾಬ್ದಾರಿ ನನಗೆ ದೊರಕಿದೆ. ಜಗತ್ತಿನ ಅದ್ಭುತವಾದ ಬಸವಣ್ಣನ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು.
ಬಸವ ಜಯಂತಿಗೆ ಅನುಭವ ಮಂಟಪ ಪೂರ್ಣ: ಎಲ್ಲರನ್ನು ಒಪ್ಪಿಕೊಂಡ ಬಸವಣ್ಣನವರಂತೆ ಸಮಾಜ ಪರಿವರ್ತನೆ ಅವಶ್ಯವಿದೆ. ಶತಮಾನಗಳ ಅನುಭವ ಮಂಟಪದ ಕನಸು ಈಡೇರಿಸುತ್ತಿದ್ದು, ಮುಂದಿನ ವರ್ಷದ ಬಸವ ಜಯಂತಿಗೆ ಅನುಭವ ಮಂಟಪ ಪೂರ್ಣಗೊಂಡು, ಲೋಕಾರ್ಪಣೆ ಮಾಡಲಾಗುವುದು. ಅನುಭವ ಮಂಟಪವೂ ಧಾರ್ಮಿಕ, ಸಾಂಸತಿಕತೆಯ ಅಂತಾರಾಷ್ಟ್ರೀಯ ಕೇಂದ್ರವಾಗಲಿದೆ. 770 ಕಂಬಗಳ ಮೇಲೆ ಶರಣ ವಚನ, ಜೀವನ ಕೆತ್ತನೆ ಮಾಡಲಾಗಿದೆ. ಐಐಟಿ ವಿದ್ಯಾರ್ಥಿಗಳಿಗೆ ಇಷ್ಟಲಿಂಗ ಪೂಜೆಯ ಮಹತ್ವದ ಕುರಿತು ತರಬೇತಿ ನೀಡಲಾಗುತ್ತಿದೆ. ಕಾಯಕಕ್ಕೆ ಪ್ರೇರಣೆ ನೀಡಲು ಶರಣ ಗ್ರಾಮ ನಿರ್ಮಿಸಿ, ಎಲ್ಲ ಶರಣರ ವೃತ್ತಿಯ ಪಾವಿತ್ರ$್ಯತೆಯ ಸಂದೇಶ ನೀಡಿ, ಪರಂಪರೆ ಉಳಿವಿಗೆ ಶ್ರಮಿಸಲಾಗುತ್ತಿದೆ ಎಂದರು.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಮಾತನಾಡಿದರು. ಜಯಂತಿ ಉತ್ಸವ ಸಮಿತಿ ಅಧ್ಯಕ್ಷ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್​.ಪಾಟೀಲ್​ ಮಾತನಾಡಿ, ಎಲ್ಲ ಜಾತಿ, ಪಕ್ಷಗಳನ್ನು ಮೀರಿ, ಬಸವ ಜಂತಿ ಆಚರಿಸುತ್ತಿದ್ದು, ಮನುಷ್ಯನ ಒಳಿತಿಗೆ ಶ್ರಮಿಸಿದ ಬಸವಣ್ಣವರ ಮಾರ್ಗದಲ್ಲಿ ಸಾಗುವ ಪ್ರಯತ್ನ ಮಾಡಲಾಗಿದೆ. ಬಸವಾದಿ ಶರಣರು ವೈಜ್ಞಾನಿಕ ತಳಹದಿಯ ಮೇಲೆ ಬಸವ ಧರ್ಮವನ್ನು ಕಟ್ಟಿದ್ದಾರೆ. ತಮ್ಮನ್ನು ತಾನು ಅರಿಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಶರಣರು ಸಾಮಾನ್ಯರಿಗೆ ತಿಳಿಯುವಂತೆ ವಚನಗಳನ್ನು ಬರೆದಿದ್ದಾರೆ ಎಂದರು.
ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ವಿಧಾನ ಪರಿಷತ್​ ಸದಸ್ಯ , ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಜಿ.ಪಾಟೀಲ್​ ಸ್ವಾಗತಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ವಂದಿಸಿದರು.