CM D.K. Shivakumar 
ಕಲಬುರಗಿ

ಸಿಎಂ ಡಿ.ಕೆ.ಶಿವಕುಮಾರಗೆ ಮನವಿಗಳ ಮಹಾಪುರ: ಬರಕ್ಕೆ ಸ್ಪಂದಿಸಲು ಕೋರಿಕೆ

ಕಲಬುರಗಿ: ಬರ ಪೀಡಿತ ಜಿಲ್ಲೆ ಘೋಷಿಸಬೇಕು, ಬಾಕಿ ಬೆಳೆ ವಿಮೆ ಬಿಡುಗಡೆ ಮಾಡಬೇಕು, ಉಜನಿ ಡ್ಯಾಂನಿಂದ ನೀರು ಬಿಡುಗಡೆ ಮಾಡಬೇಕು, ತಳವಾರರಿಗೆ ಎಸ್.ಟಿ.ಪ್ರಮಾಣ ಪತ್ರ ನೀಡಬೇಕು ಎಂಬುದು ಸೇರಿ ಮನವಿಗಳ ಮಹಾಪೂರವೇ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಲಬುರಗಿ ಜಿಲ್ಲೆಯ ಜನರು, ರೈತರು, ಪ್ರಮುಖರು ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಕಲಬುರಗಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮಂಗಳವಾರ ಬೆಳಗ್ಗೆ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸಾರ್ವಜನಿಕರು ಹಾಗೂ ರೈತರಿಂದ ಖುದ್ದಾಗಿ ಅಹವಾಲುಗಳನ್ನು ಸ್ವೀಕರಿಸಿದರು.
ಮುಂಗಾರು ಮಳೆ ವಿಳಂಬದಿಂದ ತತ್ತರಿಸಿರುವ ಈ ಭಾಗದ ಜನರ ಕಷ್ಟ-ಸುಖಗಳನ್ನು ಆಲಿಸಿದರು.
ಕಲ್ಯಾಣ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸಾರ್ವಜನಿಕರು ಮತ್ತು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸರತಿಯಲ್ಲಿ ನಿಂತಿದ್ದರು. ಪ್ರತಿಯೊಬ್ಬರನ್ನೂ ಮುಖಾಮುಖಿಯಾಗಿ ಮಾತನಾಡಿಸಿದ ಮುಖ್ಯಮಂತ್ರಿಗಳು, ಅವರ ಕೈಯಿಂದಲೇ ಮನವಿ ಪತ್ರಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘಟನೆಗಳು. ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಪ್ರಸಕ್ತ ಸಾಲಿನಲ್ಲಿ ಮಳೆ ಅಭಾವದಿಂದ ಎದುರಾಗಿರುವ ಬೆಳೆಹಾನಿ, ನೀರಾವರಿ ಸಮಸ್ಯೆ ಹಾಗೂ ಕೃಷಿ ವಲಯದ ಕುಂದುಕೊರತೆಗಳ ಕುರಿತು ಸುದೀರ್ಘ ಚರ್ಚಿಸಿ, ತಮಗೆ ತುರ್ತು ಪರಿಹಾರ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಸಾರ್ವಜನಿಕರಿಂದ ಸಾಲು ಸಾಲು ಅರ್ಜಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸಾರ್ವಜನಿಕರ ದೂರುಗಳನ್ನು ಆದಷ್ಟು ಬೇಗ ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.