ಸೇಡಂನಲ್ಲಿ ಆಯೋಜಿಸಿದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ನ್ಯಾಯಾಧೀಶ ಶ್ರೀನಿವಾಸ ನವಲೆ ಉದ್ಘಾಟಿಸಿದರು. ಅನುರಾಧ ಪಾಟೀಲ್​, ಮೀನಾ ಪಾಟೀಲ್​ ಇದ್ದರು.  
ಕಲಬುರಗಿ

ಮಾನವನ ಬದುಕಿಗೆ ಸಮತೋಲನ ಆಹಾರ ಅಗತ್ಯ

ಸೇಡಂ: ಇಂದಿನ ಜೀವನದಲ್ಲಿ ಮಾನವನ ಆರೋಗ್ಯಯುತ ಜೀವನಕ್ಕೆ ಸಮತೋಲನ ಆಹಾರದ ಅಗತ್ಯವಿದ್ದು, ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರ ನಡೆಯಬೇಕಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಆದ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಯಾರೊಬ್ಬರೂ ಅಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಮನೆಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕಾದ ದೊಡ್ಡ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರಾದ ನಿಮ್ಮ ಮೇಲಿದೆ ಎಂದರು.

ಇತ್ತೀಚಿನ ಬೆಳವಣಿಗೆ ಗಮನಿಸಿದಾಗ ನಮ್ಮಲ್ಲಿ ಸರಿಯಾದ ಆಹಾರ ಕ್ರಮವಿಲ್ಲದೆ ಇರುವುದು ಸಹ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗುತ್ತಿದೆ. ಕೇವಲ ಹೊರಗಡೆ ಸಿಗುವ ಪಾಸ್ಟ್​ ಫುಡ್​ಗೆ ನಾವೆಲ್ಲ ದಾಸರಾಗಿದ್ದೀವಿ. ಇದೆಲ್ಲವು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು. ಯಾವುದೇ ಅತಿಯಾದಲ್ಲಿ ವಿಷವಾಗಲಿದೆ ಎನ್ನುವ ಅರಿವು ಹೊಂದಿರಬೇಕು ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧ ಪಾಟೀಲ್​ ಮಾತನಾಡಿ, ಸಮಾಜದಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಇಲಾಖೆ ಮತ್ತು ನೌಕರರು ನಿರಂತರ ಕೆಲಸ ಮಾಡುತ್ತಿದ್ದೇವೆ. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವಶ್ಯವಿರುವ ಪೌಷ್ಟಿಕ ಆಹಾರ ನೀಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಇಲಾಖೆ ಮೇಲ್ವಿಚಾರಕರಾದ ಮೀನಾ ಪಾಟೀಲ್​, ಇಂದುಮತಿ ಸ್ಥಾವರಮಠ, ಸುರೇಖಾ ಉಡಬಾಳ, ಸುರೇಖಾ ನಾಯ್ಕೋಡಿ, ಸಾಂತ್ವನ ಕೇಂದ್ರದ ಆರತಿ ಕುಲಕರ್ಣಿ ಇದ್ದರು.

ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಅನ್ನಪ್ರಶಾನ ಜರುಗಿತು.