ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಶಿಕ್ಷಣ ಅಧ್ಯಯನ ವಿಭಾಗ ಹಾಗೂ ಬೆಂಗಳೂರಿನ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಡಿ ಮಕ್ಕಳಸ್ನೇಹಿ ಗ್ರಂಥಾಲಯ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತ ಪ್ರಮಾಣಪತ್ರ ಕೋರ್ಸ್ಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ ನೋಂದಣಿಗೆ ಅ.9 ಕೊನೆಯ ದಿನ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಅ.30ರಂದು ಪ್ರಕಟಿಸಲಾಗುವುದು. ಈ ಕೋರ್ಸ್ ನ.9ರಂದು ಶುರುವಾಗಲಿದೆ. ಕರ್ನಾಟಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯ ಗ್ರಂಥಪಾಲಕರು ಹಾಗೂ ಮೇಲ್ವಿಚಾರಕರು ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರತಿ ಬ್ಯಾಚ್ನಲ್ಲಿ ಗರಿಷ್ಠ 40 ಅಭ್ಯರ್ಥಿಗಳಿಗೆ ಅವಕಾಶವಿದೆ.
ಐದು ತಿಂಗಳ ಅವಧಿಯ ಈ ಕೋರ್ಸ್ ಕನ್ನಡ ಮಾಧ್ಯಮದಲ್ಲಿ ನೀಡಲಾಗುತ್ತಿದೆ. ಸೈದ್ಧಾಂತಿಕ ಜ್ಞಾನಕ್ಕೆ ಪೂರಕವಾಗಿ ವಿವಿಧ ಪ್ರಾಯೋಗಿಕ ಚಟುವಟಿಕೆಗಳನ್ನೂ ಒಳಗೊಂಡಿದೆ. ಆನ್ಲೈನ್ ಹಾಗೂ ಮುಖಾಮುಖಿ (ನೇರ) ತರಗತಿ ಒಳಗೊಂಡ ಮಿಶ್ರ ಕಲಿಕಾ ವಿಧಾನದಲ್ಲಿ ನಡೆಸಲಾಗುತ್ತದೆ. ಗ್ರಾಪಂ ಗ್ರಂಥಾಲಯಗಳನ್ನು ಬಲಪಡಿಸುವ ಹಾಗೂ ಗ್ರಂಥಪಾಲಕರು ಮತ್ತು ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಹೆಚ್ಚಿಸುವ ಮೂಲಕ ಈ ಕಾರ್ಯಕ್ರಮ ರಾಜ್ಯದ ಲಾಂತರ ಮಕ್ಕಳಿಗೆ ಪ್ರಯೋಜನಕಾರಿ ಆಗಲಿದೆ ಎಂದು ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ತಿಳಿಸಿದ್ದಾರೆ.
ಮಾಹಿತಿಗೆ ಸಿಯುಕೆ ಶಿಕ್ಷಣ ಮತ್ತು ತರಬೇತಿ ನಿಕಾಯದ ಡೀನ್ ಪ್ರೊ.ಜಿ.ಆರ್. ಅಂಗಡಿ, ಕಾರ್ಯಕ್ರಮ ಸಂಯೋಜಕ ಡಾ.ಮಯೂರ್ ಪೂಜಾರಿ ಅವರನ್ನು ಸಂಪರ್ಕಿಸಬಹುದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯದಂತೆ ಗ್ರಂಥಪಾಲಕರ ಸಾಮರ್ಥ್ಯ ಬಲಪಡಿಸುವ ಅಗತ್ಯವಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮಕ್ಕಳಸ್ನೇಹಿ ಗ್ರಂಥಾಲಯ ರೂಪಿಸುವಲ್ಲಿ ಈ ಪ್ರಮಾಣಪತ್ರ ಕೋರ್ಸ್ ಮಹತ್ವದ ಪಾತ್ರ ವಹಿಸಲಿದೆ.> ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ, ಸಿಯುಕೆ