ಆಳಂದ: ಸರ್ಕಾರದ ವಿವಿಧ ಯೋಜನೆ ಹಾಗೂ ಪಡಿತರ ಚೀಟಿದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಲು ಅಕ್ರಮವಾಗಿ ಸಾಗಿಸುತ್ತಿದ್ದ 65.20 ಕ್ವಿಂಟಾಲ್ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಆರ್ಟಿಒ ಚೆಕ್ಪೋಸ್ಟ್ ಬಳಿ ಭಾನುವಾರ ಜಪ್ತಿ ಮಾಡಿಕೊಂಡಿದ್ದಾರೆ. 112 ತುರ್ತು ಸೇವೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಕ್ಕಿ ಅಕ್ರಮ ಸಾಗಣೆ ಮಾಹಿತಿ ಬಂದಾಕ್ಷಣ ಪರಿಶೀಲನೆ ನಡೆಸಿದಾಗ ಗೂಡ್ಸ್ ವಾಹನದಲ್ಲಿ ಅಕ್ಕಿ ತುಂಬಿದ್ದ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ. ಚಾಲಕ ಸಮೀರ್ ಪಟೇಲ್ (23)ನನ್ನು ವಿಚಾರಿಸಿದಾಗ ಯಾವುದೇ ದಾಖಲೆ ನೀಡಿಲ್ಲ. ಅಕ್ಕಿ ಶರಣು ಅವರಾದಿ ಎಂಬುವರಿಗೆ ಸೇರಿದ್ದು, ಮಹಾರಾಷ್ಟ್ರದ ಉಮರ್ಗಾ ಕಡೆ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾನೆ. ಆಹಾರ ನಿರೀಕ್ಷಕಿ ಶ್ರೀದೇವಿ ಮಠಪತಿ, ಶಿರಸ್ತೆದಾರ ಅಮರೇಶ ಸಮ್ಮುಖದಲ್ಲಿ ವಾಹನ ಪರಿಶೀಲನೆ ನಡೆಸಿದಾಗ ಸುಮಾರು 50 ಕೆಜಿ ತೂಕದ 130 ಅಕ್ಕಿ ಚೀಲ ಪತ್ತೆಯಾಗಿವೆ. ವಾಹನಸಹಿತ ಅಕ್ಕಿಯ ಒಟ್ಟು ತೂಕ 12,060 ಕೆಜಿ ಇದ್ದು, ಪ್ರತಿ ಕೆಜಿಗೆ 35 ರೂ.ನಂತೆ ಸುಮಾರು 2.28 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ. ಚಾಲಕ ಸಮೀರ್ ಪಟೇಲ್, ಅಕ್ಕಿ ಮಾಲಿಕ ಶರಣು ಅವರಾದಿ ವಿರುದ್ಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.