ಜಿಲ್ಲೆ

ಲಂಡನ್ ವಿವಿ ವಿದ್ಯಾರ್ಥಿ ನಾಯಕ ಮೋದಿ

ಚುನಾವಣೆಯಲ್ಲಿ ಕಲಬುರಗಿಯ ಮಲ್ಲಿಕಾರ್ಜುನ ಭರ್ಜರಿ ಗೆಲುವು

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಲಂಡನ ಬ್ರುನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಚುನಾವಣೆಯಲ್ಲಿ ನಗರದ ಮಲ್ಲಿಕಾರ್ಜುನ ಮೋದಿ ಭರ್ಜರಿ ಗೆಲುವು ಸಾಧಿಸಿ, ಪರಿಸರ ಮತ್ತು ನೈತಿಕತೆ ಪದಾಧಿಕಾರಿ ಸ್ಥಾನವನ್ನು ಪಡೆದಿದ್ದಾರೆ.

ಅ.೨೪ರಂದು ನಡೆದ ಚುನಾವಣೆಯಲ್ಲಿ ಆರು ಸಾವಿರ ಮತದಾರರಿದ್ದು, ೪,೬೦೦ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿದ್ದು, ೩೭೨ ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ. ಈಗಾಗಲೇ ಎರಡು ಬಾರಿ ಬ್ರುನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿ, ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಮೋದಿ ಇದೀಗ ಮೂರನೇ ಬಾರಿಗೆ ವಿಶ್ವವಿದ್ಯಾಲಯದ ಪರಿಸರ ರಕ್ಷಣೆ ಮತ್ತು ನೈತಿಕ ವಾತಾವರಣ ರೂಪಿಸುವ ಮಹತ್ವದ ಜವಾಬ್ದಾರಿಗೆ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರ ಪುತ್ರ ಮಲ್ಲಿಕಾರ್ಜುನ ೨೨ ವಯಸ್ಸಿನವರಾಗಿದ್ದು, ಕಳೆದ ಮೂರು ವರ್ಷದಿಂದ ಬ್ರುನೆಲ್ ವಿಶ್ವವಿದ್ಯಾಲಯದಲ್ಲಿ ವ್ಯವಹಾರ ನಿರ್ವಹಣೆ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಕರ್ನಾಟಕ ಸೊಸೈಟಿ ಕಟ್ಟಿದ್ದ ಯುವಕ

೨೦೦೧ರಲ್ಲಿ ಬ್ರುನೆಲ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕಾಗಿ ಪ್ರವೇಶ ಪಡೆದಿದ್ದ ಮಲ್ಲಿಕಾರ್ಜುನ ಮೋದಿ, ಬ್ರುನೆಲ್‌ನಲ್ಲಿರುವ ಕನ್ನಡಿಗರಿಗಾಗಿ ಕರ್ನಾಟಕ ಸೊಸೈಟಿ ಆರಂಭಿಸಿ, ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಕನ್ನಡಿಗರ ಸಂಘಟನೆಯನ್ನು ಕಟ್ಟಿ, ಪರಸ್ಪರ ಸಹಕಾರ, ಜ್ಞಾನ, ಜಾಗೃತಿ, ಸೇವಾ ಕಾರ್ಯಗಳಲ್ಲಿ ತೊಡಗಿದ್ದರು. ಸಹಪಾಠಿಗಳು ಇವರ ಕಾರ್ಯಕ್ಕೆ ಸಾಥ್ ನೀಡಿದ್ದರು. ಕಳೆದ ಮೂರು ವರ್ಷದಿಂದಲೂ ಇವರೇ ಕರ್ನಾಟಕ ಸೊಸೈಟಿಗೆ ಅಧ್ಯಕ್ಷರಾಗಿದ್ದಾರೆ.

ಶರಣರ ಆಶೀರ್ವಾದ ಶಕ್ತಿ ನೀಡಿದೆ

ಬ್ರುನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯಲ್ಲಿ ಕಳೆದ ಮೂರು ವರ್ಷದಿಂದಲೂ ಸಕ್ರೀಯವಾಗಿದ್ದು, ಗೆಲುವು ಸುಲಭವಾಯಿತು. ಪ್ರಸ್ತುತ ಸಂಘಟನೆಯ ಪರಿಸರ ಮತ್ತು ನೈತಿಕತೆಯ ಅಧಿಕಾರಿ ಸ್ಥಾನ ದೊರಕಿದೆ. ಈ ಮೂಲಕ ವಿಶ್ವವಿದ್ಯಾಲಯದ ಪರಿಸರ ರಕ್ಷಣೆ, ಎಲೆಕ್ಟಿçಕಲ್ ಲೈಟ್ ತೆಗೆದು, ಸೋಲಾರ್ ಅಳವಡಿಕೆ, ಪ್ಲಾಸ್ಟಿಕ್ ಮುಕ್ತ ವಾತಾವರಣ ಮಾಡುವುದು, ಮುಖ್ಯ ಕೆಲಸವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕತೆ ಕಾಪಾಡುವ ಜವಾಬ್ದಾರಿ ಹೆಗಲಿಗೆ ಏರಿದೆ. ಶರಣರ ಆಶೀರ್ವಾದ ಶಕ್ತಿ ನೀಡಿದೆ.

| ಮಲ್ಲಿಕಾರ್ಜುನ ಮೋದಿ

ವಿದ್ಯಾರ್ಥಿ ಸಂಘದ ನಾಯಕ

ಲಂಡನ್ ಬ್ರುನೆಲ್ ವಿವಿ

ನಮ್ಮ ನೆಲದ ಶಕ್ತಿ ಎಲ್ಲ ಕಡೆ ಹರಡಲಿ.

ಲಂಡನ್ ಬ್ರುನೆಲ್ ವಿಶ್ವವಿದ್ಯಾಲಯದಲ್ಲಿ ಶರಣರ ನಾಡಿನ ಯುವಕ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಖುಷಿ ಜತೆಗೆ ಹೆಮ್ಮೆ ಮೂಡಿಸಿದೆ. ಈ ಮೂಲಕ ನಮ್ಮ ನೆಲದ ಶಕ್ತಿ ಎಲ್ಲ ಕಡೆ ಹರಡಲಿ. ಅಧ್ಯಯನ ಮಾಡುವ ಸ್ಥಳದ ಸೇವೆಗೆ ಉತ್ತಮ ಅವಕಾಶ ಮಗನಿಗೆ ದೊರಕಿದ್ದು, ಸೌಭಾಗ್ಯ. ಬಸವಾದಿ ಶರಣರು, ರೇಣುಕರ ಆಶೀರ್ವಾದ ಆತನ ಮೇಲೆ ಇರಲಿ

| ಶರಣಕುಮಾರ ಮೋದಿ, ಜಿಲ್ಲಾಧ್ಯಕ್ಷ

ಅಖಿಲ ಭಾರತ ವೀರಶೈವ ಮಹಾಸಭೆ