ಜಿಲ್ಲೆ

ಮತದಾರರ ಪರಿಷ್ಕೃತ ಮತದಾರರ ಕರಡು ಪಟ್ಟಿ ಪ್ರಕಟ: ಕಲಬುರಗಿ ಜಿಲ್ಲೆಯಲ್ಲಿ 22,68,944 ಮತದಾರರು-ಬಿ.ಫೌಜಿಯಾ ತರನ್ನುಮ್

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.01-01-2025 ಅರ್ಹತಾ ದಿನಾಂಕವನ್ನಾಗಿ ಪರಗಣನೆಗೆ ತೆಗೆದುಕೊಂಡು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-224ರ ಕರಡು ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಯಾದ್ಯಂತ 11,71,973 ಪುರುಷ, 11,57,547 ಮಹಿಳೆ ಹಾಗೂ 337 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 23,29,857 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಇದಲ್ಲದೆ ಪಟ್ಟಿಯನ್ನು https://ceo.karnataka.nic.in ನಲ್ಲಿಯೂ ಪ್ರಚುರಪಡಿಸಲಾಗಿದೆ.

ಪ್ರಕಟಿತ ಕರಡು ಪಟ್ಟಿಗೆ ಅಕ್ಷೇಪಣೆಗಳಿದಲ್ಲಿ ಸಾರ್ವಜನಿಕರು ನವೆಂಬರ್ 28ರೊಳಗೆ ಸಲ್ಲಿಸಬಹುದಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಡಿಸೆಂಬರ್ 24 ರೊಳಗೆ ವಿಲೇವಾರಿ ಮಾಡಿ 2025ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕ್ಷೇತ್ರವಾರು ಮತದಾರರ ವಿವರ:

ಕರಡು ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,22,271 ಪುರುಷ, 1,17,100 ಮಹಿಳೆ, ಇತರೆ 22 ಸೇರಿ 2,39,393, ಜೇವರ್ಗಿಯಲ್ಲಿ 1,26,732 ಪುರುಷ, 1,23,842 ಮಹಿಳೆ, ಇತರೆ 24 ಸೇರಿ 2,50,598, ಚಿತ್ತಾಪೂರದಲ್ಲಿ 1,24,091 ಪುರುಷ, 1,25,187 ಮಹಿಳೆ, ಇತರೆ 16 ಸೇರಿ 2,49,294, ಸೇಡಂನಲ್ಲಿ 1,15,176 ಪುರುಷ, 1,18,921 ಮಹಿಳೆ, ಇತರೆ 31 ಸೇರಿ 2,34,128, ಚಿಂಚೋಳಿಯಲ್ಲ್ಲಿ 1,07,763 ಪುರುಷ, 1,04,710 ಮಹಿಳೆ, ಇತರೆ 14 ಸೇರಿ 2,12487, ಗುಲಬರ್ಗಾ ಗ್ರಾಮೀಣದಲ್ಲಿ 1,38,207 ಪುರುಷ, 1,32,863 ಮಹಿಳೆ, ಇತರೆ 35 ಸೇರಿ 2,71,105, ಗುಲಬರ್ಗಾ ದಕ್ಷಿಣದಲ್ಲಿ 1,45,254 ಪುರುಷ, 1,49,164 ಮಹಿಳೆ, ಇತರೆ 60 ಸೇರಿ 2,94,478, ಗುಲಬರ್ಗಾ ಉತ್ತರದಲ್ಲಿ 1,60,715 ಪುರುಷ, 1,63,657 ಮಹಿಳೆ, ಇತರೆ 94 ಸೇರಿ 3,24,466 ಹಾಗೂ ಆಳಂದನಲ್ಲಿ 1,31,764 ಪುರುಷ, 1,22,103 ಮಹಿಳೆ, ಇತರೆ 41 ಸೇರಿ 2,53,908 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಜಿಲ್ಲೆಯಲ್ಲಿ ಲಿಂಗಾನುಪಾತ ಮತದಾರರ ಅಂಕಿ ಸಂಖ್ಯೆ ಗಮನಿಸಿದಾಗ 1,000 ಪುರುಷ ಮತದಾರರಿಗೆ 988 ಮಹಿಳಾ ಮತದಾರರಿದ್ದಾರೆ. ಅದೇ‌ ರೀತಿ ಜನಸಂಖ್ಯೆ ಅನುಪಾತ ನೋಡಿದಾಗ ಶೇ.70.71 ಜನ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿಸಿ ಮನವಿ

ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬೇಕು. ಮೃತರ ಪ್ರಕರಣದಲ್ಲಿ ಹೆಸರು ತೆಗೆದುಹಾಕಲು ಮತ್ತು ಸ್ಥಳಾಂತರಗಳಿದ್ದಲ್ಲಿ ನಮೂನೆ-7 ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು, ಜನ್ಮ ದಿನಾಂಕ ಹಾಗೂ ಇನ್ನಿತರ ತಿದ್ದುಪಡಿಗೆ ನಮೂನೆ-8ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಸೇರ್ಪಡೆ, ಸ್ಥಳಾಂತರ, ತೆಗೆದು ಹಾಕುವಿಕೆ ಹಾಗೂ ತಿದ್ದುಪಡಿಗೆ ವೋಟರ್ ಹೆಲ್ಪ್ ಲೈನ್ ಆ್ಯಪ್ ಸಹ ಬಳಸಬಹುದಾಗಿದ್ದು, ಒಟ್ಟಿನಲ್ಲಿ ಅರ್ಹ ನಾಗರಿಕರು, 18-19 ವಯೋಮಾನದ ಯುವ ಮತದಾರರು ತಪ್ಪದೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

2,400 ಮತಗಟ್ಟೆಗಳು

ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 776 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,624 ಸೇರಿ ಒಟ್ಟು 2,400 ಮತಗಟ್ಟೆ ಗುರುತಿಸಲಾಗಿದೆ ಎಂದು ಡಿ.ಸಿ. ತಿಳಿಸಿದ್ದಾರೆ.