ಶ್ರೀಕಾಂತ್ ಶೆಟ್ಟಿ 
ಜಿಲ್ಲೆ

ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಲಬುರಗಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ

ಹಿಂದೂ ಮಹಾ ಗಣಪತಿಯಲ್ಲಿ ವಿಶೇಷ ಭಾಷಣಕ್ಕೆ ತಡೆ

ಕಲಬುರಗಿ: ನಗರದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಅ.1ರಂದು ವಿಶೇಷ ಭಾಷಣಕ್ಕೆ ಆಹ್ವಾನಿತರಾಗಿದ್ದ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿಯನ್ನು ಕಲಬುರಗಿ ಜಿಲ್ಲಾ ಪ್ರವೇಶ ನಿರ್ಬಂಧಿಸಿ, ನಗರ ಡಿಸಿಪಿ ಆದೇಶಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಕಲಬುರಗಿ ನಗರ ಪ್ರವೇಶಿಸದಂತೆ ಸೆಪ್ಟೆಂಬರ್ 30, 2026 ರಿಂದ ಅಕ್ಟೋಬರ್ 4, 2026 ರವರೆಗೆ ನಿರ್ಬಂಧ ವಿಧಿಸಿ ಕಲಬುರಗಿ ನಗರದ ಉಪ-ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದ ಕೋಟೆ ಎದುರುಗಡೆ ರಾಜು ನವಲದಿ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮಹಾಗಣಪತಿ ಸಮಿತಿಯು ಸೆಪ್ಟೆಂಬರ್ 14, 2026 ರಿಂದ ಅಕ್ಟೋಬರ್ 4, 2026 ರವರೆಗೆ 21 ದಿನಗಳ ಗಣೇಶೋತ್ಸವವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 1, 2026 ರಂದು ನಡೆಯಲಿರುವ ಸಮಾರಂಭಕ್ಕೆ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರನ್ನು ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು.

ಈ ಕುರಿತು ಚೌಕ್ ಪೊಲೀಸ್ ಠಾಣೆ ಹಾಗೂ ಎಸಿಪಿ ನಾರ್ತ್ ಉಪ-ವಿಭಾಗದ ಪೊಲೀಸರು ಸಲ್ಲಿಸಿದ ವರದಿಯ ಅನ್ವಯ, ಈ ಹಿಂದೆ ಶ್ರೀಕಾಂತ್ ಶೆಟ್ಟಿ ಅವರು ರಾಜ್ಯದ ವಿವಿಧೆಡೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದ ನಿದರ್ಶನಗಳಿವೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, 2023ರ ನವೆಂಬರ್ 23 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ "ಬಿ" ರೌಡಿ ಶೀಟ್ ತೆರೆಯಲಾಗಿದ್ದು, ಅದು ಪ್ರಸ್ತುತ ಚಾಲ್ತಿಯಲ್ಲಿದೆ.

ಶ್ರೀಕಾಂತ್ ಶೆಟ್ಟಿ ಅವರ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆಗಳು ಹಾಗೂ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

* ಉಡುಪಿ ನಗರ ಠಾಣೆ: ಅಪರಾಧ ಸಂಖ್ಯೆ 151/2022 (ಕಲಂ 143, 149 ಐಪಿಸಿ ಮತ್ತು 27 ಆರ್ಮ್ಸ್ ಆಕ್ಟ್) ಹಾಗೂ 152/2022 (ಕಲಂ 153(ಎ) ಜೊತೆಗೆ 34 ಐಪಿಸಿ)

* ಮಣಿಪಾಲ ಠಾಣೆ: ಅಪರಾಧ ಸಂಖ್ಯೆ 164/2021 (ಕಲಂ 3(1)(ಯು) ಎಸ್.ಸಿ/ಎಸ್.ಟಿ ಕಾಯ್ದೆ)

* ಕಾರ್ಕಳ ನಗರ ಠಾಣೆ: ಅಪರಾಧ ಸಂಖ್ಯೆ 188/2024 (ಕಲಂ 353(2) ಬಿ.ಎನ್.ಎಸ್)

* ಬಜ್ಪೆ ಪೊಲೀಸ್ ಠಾಣೆ (ಮಂಗಳೂರು): ಅಪರಾಧ ಸಂಖ್ಯೆ 90/2025 (ಕಲಂ 189(2), 191(2), 285, 192, 351(2), 351(3), 190 ಬಿ.ಎನ್.ಎಸ್ ಮತ್ತು 107, 109 ಕೆಪಿ ಆಕ್ಟ್)

* ಪುತ್ತೂರು ನಗರ ಠಾಣೆ (ದಕ್ಷಿಣ ಕನ್ನಡ): ಅಪರಾಧ ಸಂಖ್ಯೆ 115/2026 (ಕಲಂ 196(1), (ಎ) ಬಿಎನ್ಎಸ್ - 2023)

ನಗರದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯ ವರದಿಯ ಆಧಾರದ ಮೇಲೆ ಅವರಿಗೆ ನಗರ ಪ್ರವೇಶ ನಿರ್ಬಂಧ ಹೇರಲಾಗಿದೆ.