ಜಿಲ್ಲೆ

ಕಾಮಗಾರಿಗೂ ಮುನ್ನ ಸುರಕ್ಷತೆಗೆ ಆದ್ಯತೆ ಕೊಡಿ

ಕಲಬುರಗಿ: ಸುರಕ್ಷತಾ ಕ್ರಮ ಕೈಗೊಳ್ಳುವ ಮೂಲಕ ಅನಾಹುತ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ವಿಶಾಲ್ ದರ್ಗಿ ಎಲ್ ಆ್ಯಂಡ್ ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಲ್ ಆ್ಯಂಡ್ ಟಿ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿಯವರು ಯಾರು ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಪಾಲಿಕೆಯ ವ್ಯಾಪ್ತಿಗಿಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸಿಟಿಯಲ್ಲಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿದ್ದು, ಇದರಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಕಿಡಿಕಾರಿದರು.
ಕಂಪನಿ ವಿರುದ್ಧ ದೂರು ದಾಖಲಿಸಿ, ಅಂದಾಗಲೇ ಅಧಿಕಾರಿಗಳು ಎಚ್ಚರಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿ ಸಂದರ್ಭದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು, ಬೇಕಾಬಿಟ್ಟಿ ಕೆಲಸ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕುಡಿಯುವ ನೀರಿನ ಕೊಳವೆಬಾವಿ ಸಮಸ್ಯೆ ತಲೆದೂರಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ವಿವಿಧ ಸಮಸ್ಯೆಗಳಿಗೆ ವಾರದಲ್ಲಿ ಪರಿಹಾರ ಕಲ್ಪಿಸಬೇಕು. ಪಾಲಿಕೆ ಅಧಿಕಾರಿಗಳಲ್ಲಿ ತಾತ್ಸಾರ ಮನೋಭಾವ ಹೆಚ್ಚಾಗಿದ್ದು, ಕೇವಲ ಸಭೆ ಮಾಡಿದರೆ ಪರಿಹಾರ ಸಿಗಲ್ಲ. ಜನಸ್ನೇಹಿ ಕೆಲಸ ಮಾಡಬೇಕು ಎಂದು ಹೇಳಿದರು.
ಘಟನೆಗೆ ಸಂಬAಧಿಸಿದAತೆ ಶನಿವಾರದೊಳಗೆ ಮೃತ ಬಾಲಕರಿಗೆ ತಲಾ ೧೦ ಲಕ್ಷ ರೂ. ಮೊತ್ತದ ಚೆಕ್ ನೀಡಬೇಕು, ಮನೆಯಲ್ಲಿ ಇಬ್ಬರಿಗೂ ನೌಕರಿ ಕೊಡಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು. ಎಲ್ ಆ್ಯಂಡ್ ಟಿ ಅಧಿಕಾರಿಗಳು ಮಾತನಾಡಿ, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು, ಮುಂದಿನ ದಿನಗಳಲ್ಲಿ ಸುರಕ್ಷತೆಯೊಂದಿಗೆ ಕೆಲಸ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಉಪ ಮಹಾಪೌರ ಶಿವಾನಂದ ಪಿಸ್ತಿ, ಆಯುಕ್ತ ಭುವನೇಶ ಪಾಟೀಲ್, ಪ್ರತಿಪಕ್ಷ ನಾಯಕ ಅಜ್ಮಲ್ ಗೋಲಾ ಇತರರಿದ್ದರು.