ಕಲಬುರಗಿ: ಮಹಾನಗರ ಪಾಲಿಕೆಯ ಆಯುಕ್ತರ ನಕಲಿ ಸಹಿ ಮಾಡಿ ಅಕ್ರಮವಾಗಿ ಹಣ ವಿಥಡ್ರಾ ಮಾಡಿಕೊಂಡಿದ್ದ ಪಾಲಿಕೆ ಆಯುಕ್ತರ ಆಪ್ತಸಹಾಯಕ ಸೇರಿ ಐವರನ್ನು ಬಂಧಿಸಿ, ಬಂಧಿತರಿಂದ 30.75 ಲಕ್ಷ ರೂ. ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಆಯುಕ್ತರ ಪಿಎ ಮಹ್ಮದ್ ನಯಿಮುದ್ದೀನ್ ಹಸನೋದ್ದೀನ್ ಸರಗಿ(38), ವಾಜೀದ್ ಇಮ್ರಾನ್ (34), ಮಿರ್ಜಾ ಆರೀಫ್ ಬೇಗ (31), ಗುತ್ತಿಗೆ ಆಧಾರದಲ್ಲಿ ಪಾಲಿಕೆಯಲ್ಲಿ ಅಕೌಂಟೆಂಟ್ ನಸೀರ್ ಸಲೀಂ ಅಹ್ಮದ್ (38), ಸೀನಿಯರ್ ಪ್ರೋಗ್ರಾಮರ್ ಮೊಹ್ಮದ್ ಅಬ್ದುಲ್ ರೆಹೆಮಾನ್ (28) ಬಂಧಿತ ಆರೋಪಿಗಳು. ಇದರಲ್ಲಿ ಮೂವರು ಪಾಲಿಕೆಯಲ್ಲಿ ಕೆಲಸಗಾರರಿದ್ದು, ಇಬ್ಬರು ಹೊರಗಿನವರಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
30.75 ಲಕ್ಷ ನಗದು, 49 ಸಾವಿರ ಬ್ಯಾಂಕ್‌ನಲ್ಲಿದ್ದ ಹಣ ಫ್ರೀಜ್ ಮಾಡಿದ್ದು, ಒಟ್ಟು 31.25 ಲಕ್ಷ ರೂ. ನಗದು ವಶಕ್ಕೆ ಪಡೆದಂತಾಗಿದೆ. ಮೂರು ಚೆಕ್‌ಗಳ ಮೇಲೆ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿದ್ದು, ಮೊದಲಿಗೆ ಒಂದು ಚೆಕ್‌ನಿಂದ 36.56 ಲಕ್ಷ ರೂ. ವಿಥಡ್ರಾ ಮಾಡಿಕೊಂಡು ನಯೀಮುದ್ದೀನ್ ಮತ್ತು ೨ ಸಹಚರರು ಹಂಚಿಕೊಂಡಿದ್ದರು. ಚೀಟಿಂಗ್, ಸಂಘಟಿತ ಆರೋಪ, ಫೋರ್ಜರಿ ಸೇರಿ ವಿವಿಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು ಎಂದರು.
ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ ಎಚ್.ನಾಯಕ ಇತರರಿದ್ದರು.
ಆಯುಕ್ತರಿಲ್ಲದಿದ್ದಾಗಲೇ ಕೃತ್ಯ: ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆಯಾಗಿದ್ದ ಮತ್ತು ಆಯುಕ್ತರು ಸುದೀರ್ಘ ರಜೆ ಮೇಲೆ ಇರುವ ವೇಳೆ ಇಡೀ ಷಡ್ಯಂತ್ರ ರೂಪಿಸಿದ ಆರೋಪಿ ಪಿಎ ನಯೀಮುದ್ದೀನ್ ಇತರರು ಡಿಡಿಗಳನ್ನು ನಿರಂತರವಾಗಿ ಬಳಸದ ಪಾಲಿಕೆಯ ಖಾತೆಗೆ ಜಮಾ ಮಾಡಿ, ಅದರಿಂದ ಆಯುಕ್ತರ ನಕಲಿ ಸಹಿ ಇರುವ ಚೆಕ್ ಬಳಸಿ ವಿಥಡ್ರಾ ಮಾಡಿದ್ದರು. ಆಯುಕ್ತರು ವರ್ಗಾವಣೆ ತೆರವಾಗಿ ನಂತರ ರಜೆ ಮೇಲೆ ತೆರಳಿದ್ದಾಗ ಕೃತ್ಯ ಮಾಡಿದ್ದರು.
ಸಾಲ ತೀರಿಸಲು ಪಿಎ ಸಂಚು...: ೨೦೦೭ರಲ್ಲಿ ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ನೌಕರಿಗೆ ಸೇರಿದ್ದ ನಯೀಮುದ್ದೀನ್ ೨೦೨೦ರಲ್ಲಿ ಎಫ್‌ಡಿಎ ಆಗಿದ್ದ ಕಳೆದ ಎರಡು ವರ್ಷದಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಸಾಲ ತೀರಿಸುವುದಕ್ಕಾಗಿ ಹಣವನ್ನು ಅಕ್ರಮವಾಗಿ ಗಳಿಸಲು ಪಾಲಿಕೆಯ ಇತರ ಅಧಿಕಾರಿಗಳು, ಹೊರಗಿನ ಇಬ್ಬರೊಂದಿಗೆ ಕೂಡಿ ಯೋಜನೆ ರೂಪಿಸಿದ್ದ ಎಂದು ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಪೊಲೀಸರ ಕಾರ್ಯಕ್ಕೆ ಶ್ಲಾಘನೆ... ಪಾಲಿಕೆಯಲ್ಲಿ ೧.೩೬ ಕೋಟಿ ರೂ. ಡಿಡಿ ಮೂಲಕ ಜಮಾ ಮಾಡಿ, ಚೆಕ್‌ನಿಂದ ವಿಥಡ್ರಾ ಮಾಡಿಕೊಳ್ಳುವ ಸಂಚು ರೂಪಿಸಿ, ೩೬ ಲಕ್ಷ ರೂ. ಅಕ್ರಮವಾಗಿ ವಿಥಡ್ರಾ ಮಾಡಿಕೊಂಡ ಪ್ರಕರಣ ದಾಖಲಾದ ಒಂದು ತಿಂಗಳಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ, ಭಾಗಶಃ ಹಣವನ್ನು ವಶಕ್ಕೆ ಪಡೆದ ಎಸಿಪಿ ಭೂತೇಗೌಡ ಮಾರ್ಗದರ್ಶನದಲ್ಲಿ ಪಿಐ ಸೋಮಲಿಂಗ ಕಿರದಳ್ಳಿ ನೇತೃತ್ವದ ಸಿಬ್ಬಂದಿ ಶಿವಪ್ರಕಾಶ, ಕೇಸುರಾಯ, ವಿಶ್ವನಾಥ, ರಾಮುಪವಾರ, ಶಶಿಕಾಂತ, ಶಿವಶರಣಪ್ಪ, ನವೀನ್‌ಕುಮಾರ ಅವರನ್ನು ಒಳಗೊಂಡ ತಂಡಕ್ಕೆ ನಗರ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದರು.
ಡಿಡಿ ಕೊಟ್ಟಿರುವ ಬಗ್ಗೆ ದಾಖಲೆ ಇದ್ದು, ಪಿಎ ನಯಿಮುದ್ದೀನ್ ನಕಲಿ ಸಹಿ ಮಾಡಿದ್ದಾನೆ. ಇತರರನ್ನು ಡಿಡಿ ಜಮಾ ಮಾಡುವುದು, ಹಣ ವಿಥಡ್ರಾ ಮಾಡುವ ಆರೋಪದಲ್ಲಿ ಬಂಧಿಸಿದ್ದು, ಬೇರೆ ಅಧಿಕಾರಿಗಳ ಕೈವಾಡ ಸೇರಿ ಇತರ ಕಾರಣಗಳ ಬಗ್ಗೆ ಉನ್ನತ ತನಿಖೆ ನಡೆಸಲಾಗುತ್ತದೆ. | ಡಾ.ಶರಣಪ್ಪ ಎಸ್.ಡಿ. ನಗರ ಪೊಲೀಸ್ ಆಯುಕ್ತ