ಕಲಬುರಗಿ: ಕಿಲ್ಲರ್ ಕರೊನಾಗೆ ಒಂದೇ ದಿನ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದ ಆರ್ ಸಿ ತಾಂಡದ ನಿವಾಸಿಗಳಾಗಿರುವ ಚಾಂದಿಬಾಯಿ ನಾಯಕ್ (74) ಮತ್ತು ಭಜನ್ ನಾಯಕ್(32) ಕರೊನಾಗೆ ಬಲಿಯಾದ ತಾಯಿ-ಮಗ. ಇಬ್ಬರು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಇಹಲೋಕ ತ್ಯಜಿಸಿದ್ದಾರೆ.
ಒಂಬತ್ತು ದಿನಗಳ ಹಿಂದೆ ಚಾಂದಿಬಾಯಿ ಮತ್ತೊಬ್ಬ ಹಿರಿಯ ಪುತ್ರ ಹಾಗೂ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಸಹ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದರು. ವಾರದಲ್ಲಿ ಒಂದೇ ಕುಟುಂಬದ ತಾಯಿ-ಇಬ್ಬರು ಮಕ್ಕಳು ಸೇರಿ ಮೂರು ಜನರು ಮೃತಪಟ್ಟಿದ್ದಾರೆ.
ಇನ್ನೊರ್ವ ಪುತ್ರ ಮಹೇಶ್ ನಾಯಕ್ ಎಂಬುವವರು ಸಹ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮೂವರು ಬಲಿಯಾದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. (ದಿಗ್ವಿಜಯ ನ್ಯೂಸ್)