ಜಿಲ್ಲೆ

ಉಡಾಫೆ ಉತ್ತರ ಲೋಕಾಯುಕ್ತ ಸಹಿಸಲ್ಲ

ಕೃಷ್ಣ ಕುಲಕರ್ಣಿ

ಚಿಂಚೋಳಿ: ಕ್ಷೇತ್ರದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಉಡಾಫೆ ಉತ್ತರ ನೀಡುತ್ತಿರುವ ದೂರು ಹೆಚ್ಚುತ್ತಿವೆ. ಇದನ್ನು ಸಹಿಸುವುದಿಲ್ಲ. ನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದು ಲೋಕಾಯುಕ್ತ ಡಿಎಸ್ಪಿ ಗೀತಾ ಬೇನಾಳ ಎಚ್ಚರಿಕೆ ನೀಡಿದರು.

ಪಟ್ಟಣದ ತಹಸೀಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಕಚೇರಿಯಿಂದ ಸಾರ್ವಜನಿಕರ ಅಹವಾಲು ಆಲಿಸಿದ ಅವರು, ಕಂದಾಯ, ಪುರಸಭೆ, ಶಿಕ್ಷಣ ಇಲಾಖೆ ದೂರು ಹೆಚ್ಚಾಗಿದ್ದು, ಸುಧಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಾರ್ವಜನಿಕರ ಆಹವಾಲು ಸಭೆಗೆ ಸ್ಲಂ ಬೋರ್ಡ್, ನಾಗರಾಳ ಜಲಾಶಯ ಅಭಿಯಂತರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಅವರ ವಿರುದ್ಧ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಅಕ್ರಮ ಗಣಿಗಾರಿಕೆ ಕುರಿತು ರವಿಶಂಕರರೆಡ್ಡಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗುವುದು. ನಾಗರಾಳ ಜಲಾಶಯದಿಂದ ಕಾಲುವೆ ನವೀಕರಣ ಕಳಪೆ ಕುರಿತು ದೂರು ಬಂದಿದ್ದು, ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.

ಲೋಕಾಯುಕ್ತ ಪಿಎಸ್‌ಐ ಅಕ್ಕಮಹಾದೇವಿ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಪಂ ಇಓ ಶಂಕರ ರಾಠೋಡ, ಪಿಎಸ್‌ಐ ಗಂಗಮ್ಮ, ಸಮಾಜ ಕಲ್ಯಾಣ ಅಧಿಕಾರಿ ಪ್ರಭುಲಿಂಗ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಕುಮಾರ, ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ, ಬಿಇಒ ಲಕ್ಷö್ಮಯ್ಯ, ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ವಲಯ ಅರಣ್ಯಾಧಿಕಾರಿ ನಟರಾಜ ರಾಠೋಡ್, ಅನುಸೂಯ ರಾಠೋಡ್, ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ ಸುಲೇಪೇಟ, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಇತರರಿದ್ದರು.