ಕಲಬುರಗಿ: ನಿಷೇಧಿತ ಮತ್ತು ಬರಿಸುವ ಕೊಡೆನೈನ್ ಸಿರಪ್ ಸಾಗಣೆ ಮಾಡುತ್ತಿದ್ದ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಕಲಬುರಗಿಯ ಇಬ್ಬರು ಒಳಗೊಂಡಂತೆ ಮೂವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಆಲಗೂಡ (ಕಣ್ಣಿ) ಮತ್ತು ಇರ್ಫಾನ್ ಇಬ್ರಾಹಿಂ ಬಂಧಿತರು. ಇಬ್ಬರು ಕಲಬುರಗಿಯವರು. ಅವರೊಂದಿಗೆ ಕಾರಿನ ಚಾಲಕನನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಲ್ಲರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಆಧಾರಬಾಡ್ ಜೈಲಿನಲ್ಲಿರಿಸಲಾಗಿದೆ.
ಮಾದಕ ವಸ್ತು ನಿಗ್ರಹ ಪಡೆಯವರು ಮುಂಬಯಿನ ಕಲ್ಯಾಣದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಕಲ್ಯಾಣದ ಬಾಕ್ರಿ ಮಂಡಿ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತು ಗುಣ ಹೊಂದಿರುವ ನಿಷೇಧಿತ ಕೆಮ್ಮಿನ ಔಷಧ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ, 120 ಬಾಟಲ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಎಂದು ಮಹಾರಾಷ್ಟ್ರ ಪೊಲೀಸ್ ಮೂಲಗಳು ತಿಳಿಸಿವೆ.
ಲಿಂಗರಾಜ ಸೇರಿದಂತೆ ಮೂವರ ವಿರುದ್ಧ ಕಲ್ಯಾಣದ ಬಜಾರಪೇಟ ಠಾಣೆಯಲ್ಲಿ ಮಾದಕ ವಸ್ತು ಸಾಗಣೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವೈದ್ಯರ ಸಲಹಾ ಚೀಟಿ ಇಲ್ಲದೆ ಈ ಔಷಧ ನೀಡುವಂತಿಲ್ಲ. ಕೆಲವರು ಅದನ್ನು ನಶೆ ಮಾಡಿಕೊಳ್ಳಲು ಬಳಸುತ್ತಾರೆ. ಹೀಗಾಗಿ ಅದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಅದನ್ನು ಮುಂಬಯಿಗೆ ಸಾಗಣೆ ಮಾಡಲಾಗುತ್ತಿತ್ತು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.