ಕಲಬುರಗಿ: ಹಿಂದೂ ಧರ್ಮದಿಂದ ಲಿಂಗಾಯತರು ಪ್ರತ್ಯೇಕ ಎನ್ನುವವರು ದ್ವಿಮುಖ ನೀತಿ ಖಂಡಿಸಿ ನಗರದಲ್ಲಿ ಹಮ್ಮಿಕೊಂಡ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಅಖಂಡ ಹಿಂದೂ ಧರ್ಮದ ವಿಚಾರಧಾರೆಗಳನ್ನು ಪ್ರತಿಪಾದಿಸಿ, ಹಿಂದುತ್ವದ ಅಂಖಡತೆಯ ಸಂದೇಶವನ್ನು ಸಾರಲಾಯಿತು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕನ್ಹೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಾಡಿನ 250ಕ್ಕೂ ಹೆಚ್ಚು ವಿವಿಧ ಕಾಯಕ ಸಮಾಜ ಸ್ವಾಮೀಜಿಗಳ ಸಾನ್ನಿಧ್ಯ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 25 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗವಹಿಸಿ, ಅಖಂಡತೆಯ ಮಂತ್ರ ಜಪಿಸಿದರು.
ಕನ್ಹೇರಿ ಶ್ರೀಗಳು ಮಾತನಾಡಿ, ಕಮ್ಯುನಿಸ್ಟರು ಹಿಂದೂ ಧರ್ಮದ ಸತ್ವದ ಸಾರವನ್ನು ಅವಹೇಳನ ಮಾಡಿ, ಶಕ್ತಿ ಕುಂದಿಸಿ ಜನರ ಮನಸ್ಸಿನಲ್ಲಿ ತಾತ್ಸಾರ ಮೂಡಿಸಿ ಜನರನ್ನು ಧರ್ಮದಿಂದ ವಿಮುಖ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇನ್ನು ಪ್ರತ್ಯೇಕ ಲಿಂಗಾಯತ ಎಂದು ಬಸವಣ್ಣನ ಹೆಸರಿನಲ್ಲಿ ಬಸವ ತತ್ವವನ್ನು ಒಂದಿನಿತು ಪ್ರಚಾರ ಮಾಡದೇ, ತಮ್ಮ ಮಠ, ಮನೆ ತುಂಬಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಎಲ್ಲ ಹಿಂದೂ ಸಮಾಜ ಒಗ್ಗೂಡಿದೆ. ಹಿಂದೂತ್ವದ ಬಸವ ತತ್ವವೇ ನಮಗೆ ಆಧಾರ. ಹಿಂದುತ್ವದ ಹುಚ್ಚು ನಮಗೆ ಸದಾ ಇದೆ. ಕಾರ್ಯಕ್ರಮದಲ್ಲಿ ನಿರೀೆಗೆ ಮೀರಿ ಜನ ಸೇರಿದ್ದು, ಜನರ ಒಲವು, ನಿಲುವು ಯಾವ ಕಡೆ ಇದೆ ಎಂಬುದರ ಸ್ಪಷ್ಟ ಸಂದೇಶವಾಗಿದೆ. ಜನ ಜಾಗೃತರಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಒಗ್ಗಟ್ಟಾಗಿ ಸಾಗಣೋ. ಪೂಜ್ಯರ ಮಾರ್ಗದರ್ಶನ ಇರಲಿದೆ ಎಂದು ಹೇಳಿದರು.
ಬೀದರ್ನ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಶ್ರೀ ಪರಮಾನಂದ ಸ್ವಾಮೀಜಿ, ಶ್ರೀ ಸವಿತಾನಂದನಾಥ ಸ್ವಾಮೀಜಿ ಸೇರಿ ವಿವಿಧ ಪೂಜ್ಯರಿದ್ದರು. ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಶಾಸಕರಾದ ಬಸವರಾಜ ಮತ್ತಿಮಡು, ಪ್ರಮುಖರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್, ಮಾಜಿ ಸಂಸದ ಡಾ.ಉಮೇಶ ಜಾಧವ್ ಇತರರಿದ್ದರು.
ಒಗ್ಗಟ್ಟು ಸಾರಿದ ಮೆರವಣಿಗೆ...: ಸಮಾವೇಶಕ್ಕೂ ಮುನ್ನ ನಗರದ ಜಗತ್ ವೃತ್ತದಿಂದ ಎನ್ವಿ ಮೈದಾನದವರೆಗೆ ಎರಡು ಸಾವಿರಕ್ಕಿಂತ ಹೆಚ್ಚು ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ ಜತೆಗೆ ಸುಮಾರು 100 ಶರಣರು, ಮಹಾತ್ಮರು, ಸಮಾಜ ಸೇವಕರ ಭಾವಚಿತ್ರಗಳ ಮೆರವಣಿಗೆಯೂ ಇಡೀ ಹಿಂದೂ ಸಮಾಜದ ಒಗ್ಗಟ್ಟಿನ ಸಂದೇಶ ಸಾರಿತು. ಕನ್ಹೇರಿ ಶ್ರೀ ಸೇರಿದಂತೆ ಎಲ್ಲ ಪೂಜ್ಯರು ಹೆಜ್ಜೆ ಹಾಕಿದರು.
ಕಮ್ಯುನಿಸ್ಟರು, ಪ್ರತ್ಯೇಕವಾದಿಗಳ ಜತೆ ಸೇರಿದ ಕಾವಿಧಾರಿ ಕಮ್ಯುನಿಸ್ಟ್ರು ಕಾಯಕ, ದಾಸೋಹ ಮಾಡಲ್ಲ. ಆದರೆ ಬಸವಣ್ಣನನನ್ನು ಪೇಟೆಂಟ್ ಪಡೆದಂತೆ ಆಡುತ್ತಿದ್ದಾರೆ. ವಿರೋಧಿಸಲು ಇವರಿಗೆ ಅಧಿಕಾರವಿಲ್ಲ. ಸಂವಿಧಾನ ಎಲ್ಲರಿಗೂ ಅಧಿಕಾರ, ವಾಕ್ ಸ್ವಾತಂತ್ರ$್ಯ, ಆಚರಣೆ, ಧಾರ್ಮಿಕ ಸ್ವಾತಂತ್ರ$್ಯ ನೀಡಿದೆ. ಅದನ್ನು ಪ್ರಶ್ನಿಸುವ ಹಕ್ಕು ಇವರಿಗೆ ಇಲ್ಲ. ಬಸವಣ್ಣನನ್ನು ಒಂದು ಜಾತಿ, ಪ್ರದೇಶಕ್ಕೆ ಸೀಮಿತ ಮಾಡಿದ್ದು, ವ್ಯಾಪಾರ ಮಾಡುತ್ತಿದ್ದು, ಈ ಭಾಗವನ್ನು ಬಿಟ್ಟು ಬೇರೆ ಹೋಗಲು ಬಿಡುತ್ತಿಲ್ಲ. ವಿಶ್ವಕ್ಕೆ ಪಸರಿಸುವ ಕೆಲಸ ನಾವೆಲ್ಲರೂ ಮಾಡೋಣ.ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನ್ಹೇರಿ ಮಠ ಸಿದ್ಧಗಿರಿ