ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರತ್ನಮಾನಸದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ದೊರೆಯುತ್ತಿದ್ದು, ಇದು ರಾಷ್ಟ್ರಕ್ಕೆ ಮಾದರಿಯಾದ ವಿದ್ಯಾರ್ಥಿ ನಿಲಯವಾಗಿದೆ. ಶಿಕ್ಷಣ ಪಠ್ಯಕ್ಕೆ ಮಾತ್ರ ಸೀಮಿತ ವಾಗಬಾರದು. ಪಠ್ಯೇತರ ಚಟುವಟಿಕೆ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುವುದರೊಂದಿಗೆ ಪ್ರತಿಭೆ ಬೆಳಕಿಗೆ ಬರಲು ಸೂಕ್ತ ವೇದಿಕೆ. ಬೇಸಿಗೆ ಶಿಬಿರ ಇದಕ್ಕೆ ಪೂರಕವಾಗಿವಾಗಿದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.
ಶುಕ್ರವಾರ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯ ಉಜಿರೆಯಲ್ಲಿ ಏ.4ರಿಂದ ಏ.11ರವರೆಗೆ ನಡೆಯಲಿರುವ ಬೇಸಿಗೆ ಶಿಬಿರ ಕಲಾಬ್ದಿ-2025ನ್ನು ಉದ್ಘಾಟಿಸಿ ಮಾತನಾಡಿ, 1973-74ರಲ್ಲಿ ರತ್ನಮಾನಸ ವಿದ್ಯಾರ್ಥಿ ನಿಲಯವನ್ನು ಆಗಿನ ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆ, ರತ್ನಮ್ಮ ಆರಂಭಿಸಿದರು. ಮಕ್ಕಳಿಗೆ ಜೀವನ ಶಿಕ್ಷಣ ನೀಡುವ ರಾಷ್ಟ್ರದ ಮೊಟ್ಟ ಮೊದಲ ವಿದ್ಯಾರ್ಥಿ ನಿಲಯ ಇದಾಗಿತ್ತು. ನಂತರದ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಇದೇ ಮಾದರಿಯಲ್ಲಿ ವಿದ್ಯಾರ್ಥಿ ನಿಲಯ ಆರಂಭಗೊಂಡವು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ, ಸಾಂಪ್ರಾದಾಯಿಕ ಶಿಕ್ಷಣದ ಜತೆ ಜೀವನ ಶಿಕ್ಷಣ ಕಲಿಸಲಾಗುತ್ತದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ರತ್ನಮಾನಸ ವಿದ್ಯಾರ್ಥಿ ನಿಲಯ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಬೇಸಿಗೆ ಶಿಬಿರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಇಂತಹ ಶಿಬಿರ ತಮ್ಮ ಸುಪ್ತ ಪ್ರತಿಭಾ ವಿಕಸನ, ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದರು.
ರತ್ನಮಾನಸ ವಿದ್ಯಾರ್ಥಿ ನಿಲಯ ಪಾಲಕ ಯತೀಶ್ ಬಳಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚುಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕಲಾಸಕ್ತಿ ಬೆಳೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಪೂರಕವಾಗಿ ರತ್ನಮಾನಸದಲ್ಲಿ ಈ ಶಿಬಿರ ಹಮ್ಮಿಕೊಂಡಿದ್ದೇವೆ. ಇಲ್ಲಿ ಕಲಿತ ಜೀವನ ಶಿಕ್ಷಣ ರಾಜ್ಯಾದ್ಯಂತ ಪಸರಿಸಲಿ ಎಂದರು.
ವಿಜಯವಾಣಿ ಪತ್ರಿಕೆ ವರದಿಗಾರ ಮನೋಹರ್ ಬಳಂಜ, ಬೇಸಿಗೆ ಶಿಬಿರದ ಸಂಯೋಜಕ ವಿನ್ಯಾಸ್ ಭಂಡಾರಿ ನಾವೂರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಿತಿನ್ ಪ್ರಾರ್ಥನೆ ಬಳಿಕ ನಿಲಯದ ಸಹಪಾಲಕ ರವಿಚಂದ್ರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿತೇಶ್ ನಿರೂಪಿಸಿದರು. ಸಮ್ಯಕ್ ವಂದಿಸಿದರು.