ಹುಬ್ಬಳ್ಳಿ: ಸಂಗೀತ ಕ್ಷೇತ್ರದಲ್ಲಿ ಶಿಷ್ಯನೊಬ್ಬ ಉತ್ತಮನಾಗಿ ಬೆಳೆದರೆ ಗುರುಗಳಿಗೆ ಬಹಳ ಸಂತೋಷವಾಗುತ್ತದೆ. ಈ ಸಾಧನೆ ಮುಂದೆ ಗುರುವಿಗೆ ಬೇರೆ ಯಾವುದೇ ಖುಷಿ ಇರುವುದಿಲ್ಲ. ಅಂತಹ ಅತ್ಯಾನಂದ ಅದರಲ್ಲಿ ಅಡಗಿರುತ್ತದೆ ಎಂದು ಪದ್ಮಶ್ರೀ ಪಂ. ವೆಂಕಟೇಶಕುಮಾರ್ ಹೇಳಿದರು.
ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಶ್ರೀರಾಮ ಕಲಾ ವೇದಿಕೆ ವತಿಯಿಂದ ಭಾನುವಾರ ಗುರು ಪಂ. ಶೇಷಗಿರಿ ಹಾನಗಲ್ ಜನ್ಮಶತಮಾನೋತ್ಸವ ಹಾಗೂ ರಾಮಚಂದ್ರ ಯಾವಗಲ್ ಸ್ಮರಣಾರ್ಥ ಏರ್ಪಡಿಸಿದ್ದ ನಾದ ನಮನ ಕಾರ್ಯಕ್ರಮದಲ್ಲಿ ಕಲಾಶೃಂಗ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹುಟ್ಟಿದ್ದು ಸಣ್ಣ ಊರಲ್ಲಿ, ಅಲ್ಲಿ ಶಾಲೆಯೂ ಇರಲಿಲ್ಲ, ಜೀವನವೂ ಕಷ್ಟಕರವಾಗಿತ್ತು. ನಮ್ಮ ಕಷ್ಟ ಇವನಿಗೆ ಬರಬಾರದು ಎಂದು ಮನೆಯಲ್ಲಿ ಸಂಗೀತ ಕಲಿಯಲು ಗವಾಯಿಗಳ ಪುಣ್ಯಾಶ್ರಮಕ್ಕೆ ತಂದು ಬಿಟ್ಟರು. ಅಲ್ಲಿ ಕಲಿತ ಸಂಗೀತವು ನನ್ನನ್ನು ಎತ್ತರಕ್ಕೆ ಕೊಂಡೊಯ್ಯಿತು. ಪಂ. ಪಂಚಾಕ್ಷರಿ ಗವಾಯಿ, ಪಂ. ಪುಟ್ಟರಾಜ ಗವಾಯಿಗಳು ಹುಟ್ಟದಿದ್ದರೆ ನನ್ನಂತಹ ಬಡವನಿಗೆ ಸಂಗೀತ ಸಿಗುತ್ತಿರಲಿಲ್ಲ. ಅನೇಕ ಜನರಿಗೆ ಪುನರ್ಜನ್ಮ ಕೊಟ್ಟವರು ಅವರು. ಅವರಲ್ಲಿ ನಾನೂ ಒಬ್ಬ ಎಂದು ಗುರುಗಳನ್ನು ಸ್ಮರಿಸಿದರು.
ಕಲಾವಿದರಿಗೆ ಮುಖ್ಯವಾಗಿ ಆಚಾರ ವಿಚಾರ ಉತ್ತಮವಾಗಿರಬೇಕು. ಗುರು ಪರಂಪರೆ ಉಳಿಸಿಕೊಂಡು ಹೋಗಬೇಕು. ಅಂತಹ ಕಾರ್ಯವನ್ನು ರವೀಂದ್ರ ಯಾವಗಲ್ ಅವರು ಉತ್ತಮವಾಗಿ ನಡೆಸಿಕೊಂಡು ಹೊರಟಿದ್ದಾರೆ. ಕಲಾಶೃಂಗ ಪ್ರಶಸ್ತಿ ನೀಡಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಪ್ರಶಸ್ತಿಯನ್ನು ನನ್ನ ಗುರುಗಳಿಗೆ ಅರ್ಪಿಸುವೆ ಎಂದರು.
ವೇದಿಕೆ ಟ್ರಸ್ಟಿ ರವಿ ದೇಸಾಯಿ ಮಾತನಾಡಿ, ಕಲಾಶೃಂಗ ಪ್ರಶಸ್ತಿಯು ನಾಡು ಹೆಮ್ಮೆ ಪಡುವ ಕಲಾವಿದರನ್ನು ಗೌರವಿಸುವ ಆಲೋಚನೆ ಬಂದಾಗ ಹುಟ್ಟಿಕೊಂಡಿತು. ಈ ವರೆಗೆ ಹಲವು ಮಹನೀಯರಿಗೆ ಇದನ್ನು ನೀಡಲಾಗಿದೆ ಎಂದರು.
ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಮಾತನಾಡಿ, ಸಮಾಜ ಸೇವೆಯನ್ನು ಮಾಡುತ್ತ ಹೋದಂತೆ ಪ್ರಶಸ್ತಿ, ಬಹುಮಾನಗಳು ಅರಸಿ ಬರುತ್ತವೆ. ಪ್ರಶಸ್ತಿ ಹಿಂದೆ ಹೋಗದೇ ಸಾಧನೆ ಒಂದೇ ದಾರಿಯಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ವೇತಾ ಗಂಡಮಾಲಿ ಪ್ರಾರ್ಥನೆ ಹಾಡಿದರು.
ಸಂಗೀತ ಸೇವೆ ನೀಡಿದ ಕಲಾವಿದರಾದ ಪ್ರವಿಣ, ಶ್ರೀದರ ಹೆಗಡೆ, ಆದಿತ್ಯಾ ಜೋಶಿ, ನಯನ ಯಾವಗಲ್, ಸರ್ವೇಶ ಜೋಶಿ, ಯೋಗೇಶ ಭಟ್, ದೀಪಕ ದೇಸಾಯಿ, ಕೇದಾರ ಜೋಶಿ, ಶ್ರೀವತ್ಸ ಕೌಜಗಿ, ಶ್ರೀಹರಿ ದಿಗ್ಗಾವಿ, ಪ್ರಹ್ಲಾದ ದೇಶಪಾಂಡೆ, ಶ್ರೀವತ್ಸ ಕಿವಿ, ಸುರಭಿ ಸುರೇಶ, ಕೃಷ್ಣೇಂದ್ರ ಸಮರ್ಥ, ವಿನೋದ ಪಾಟೀಲ, ಕಿರಣ ಯವಗಲ್ ಮುಂತಾದವರನ್ನು ಪಂ. ರವೀಂದ್ರ ಯಾವಗಲ್ ಹಾಗೂ ಪಂ. ರಘುನಾಥ ನಾಕೋಡ ಅವರು ಶ್ರೀರಾಮ ಕಲಾ ವೇದಿಕೆ ವತಿಯಿಂದ ಗೌರವಿಸಿದರು.