ಜಿಲ್ಲೆ

ಸಾಮಾಜಿಕ ಅನುಭವಗಳೇ ಪ್ರಾಯೋಗಿಕ ಮಾದರಿ

ಉಡುಪಿ: ಪ್ರಾಯೋಗಿಕ ಮಾದರಿಗಳು ಕೇವಲ ವಿಜ್ಞಾನ, ಗಣಕಯಂತ್ರ ಮತ್ತು ವಾಣಿಜ್ಯ ವಿಭಾಗಗಳಿಗೆ ಮಾತ್ರ ಸೀಮಿತವಾಗಿರದೆ, ಕಲಾ ಮತ್ತು ಭಾಷಾ ವಿಷಯಗಳಿಗೂ ಸಂಬಂಧಿಸಿದೆ. ಇಲ್ಲಿ ಸಮಾಜದಿಂದ ಪಡೆದುಕೊಳ್ಳುವ ಅನುಭವಗಳೇ ಪ್ರಾಯೋಗಿಕ ಮಾದರಿಗಳಾಗುತ್ತವೆ ಎಂದು ಉದ್ಯಮಿ ಮತ್ತು ಪೇಪರ್​ ಕೊಲಾಜ್​ ಕಲಾವಿದ ಪ್ರಭಾಕರ ಕಿಣಿ ಅಭಿಪ್ರಾಯಪಟ್ಟರು.

ಉಡುಪಿಯ ಅಜ್ಜರಕಾಡು ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯುಎಸಿ ಮತ್ತು ಮಾನವಿಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಕಲಾ ಸಿರಿ-2024 ಅಂತರ್​ ವಿಭಾಗೀಯ ಮಟ್ಟದ ಪ್ರಾಯೋಗಿಕ ಮಾದರಿಗಳ
ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಾನವಿಕ ವಿಷಯಗಳ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿನ ಕೌಶಲ, ಸೃಜನಶೀಲತೆ, ಪಾಲ್ಗೊಳುವಿಕೆ ಮತ್ತು ಅವರಿಗೊಂದು ವೇದಿಕೆ ಕಲ್ಪಸಿಕೊಡಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್​ ಎಸ್​. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯುಎಸಿ ಸಂಚಾಲಕ ಸೋಜನ್​ ಕೆ.ಜಿ., ಕಲಾನಿಕಾಯದ ಡೀನ್​ ಪ್ರೊ. ನಿಕೇತನಾ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಡಾ. ವಾಣಿ ಆರ್​. ಬಲ್ಲಾಳ್​ ಉಪಸ್ಥಿತರಿದ್ದರು.

ಮಾನವಿಕ ಸಂಘದ ಸಂಚಾಲಕ ಡಾ. ಗುರುರಾಜ್​ ಪ್ರಭು ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಾನವಿ ವಂದಿಸಿದರು. ಚೈತ್ರಾ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.