ಜಿಲ್ಲೆ

ದಶಕ ಕಳೆದರೂ ಲೋಕಾರ್ಪಣೆಯಾಗದ ಕಲಾಭವನ

reportermys

ಮಡಿಕೇರಿ: ಸರ್ಕಾರಿ ಕಟ್ಟಡವೊಂದು ದಶಕ ಕಳೆದರೂ ಇನ್ನೂ ಲೋಕಾರ್ಪಣೆಯಾಗದೆ ಉಳಿದಿದ್ದು, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯನ್ನು ಪ್ರಶ್ನಿಸುವಂತಿದೆ.


ಕುಶಾಲನಗರದ ಹೃದಯ ಭಾಗದಲ್ಲಿ ಕಲಾ ಚಟುವಟಿಕೆಗಳಿಗೆ ಅನುಕೂಲವಾಗಲು ೨೦೦೯ರಲ್ಲಿ ಚಾಲನೆಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಭವನ ೨೦೨೨ ಕಳೆಯುತ್ತಾ ಬಂದರೂ ಇನ್ನೂ ಲೋಕಾರ್ಪಣೆಯಾಗದಿರುವುದಕ್ಕೆ ಹೊಣೆ ಯಾರು ಎಂಬುದು ಕಲಾರಸಿಕರು, ಸಾರ್ವಜನಿಕರ ಪ್ರಶ್ನೆಯಾಗಿದೆ.


ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರವರು ೨೦೦೯ ರಲ್ಲಿ ಚಾಲನೆ ನೀಡಿದ್ದು ಆರಂಭಿಕವಾಗಿ ೩ ಕೋಟಿ ಅನುದಾನದಲ್ಲಿ ಕಾಮಗಾರಿ ಚಾಲನೆಗೊಂಡಿತು. ಬಳಿಕ ಹೆಚ್ಚುವರಿಯಾಗಿ ೯೦ ಲಕ್ಷದ ಪ್ರಸ್ತಾವನೆಯ ಅನುದಾನ ಕೂಡ ಬಿಡುಗಡೆಯಾಯಿತು. ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ವೆಚ್ಚ ದುಪ್ಪಟ್ಟಾಯಿತು. ಒಳಂಗಾಣದ ಅಪೂರ್ಣ ಕಾಮಗಾರಿ, ಹೊರ ಆವರಣದಲ್ಲಿ ಕೆಲವೊಂದು ಕಾಮಗಾರಿಗೆ ಹೆಚ್ಚುವರಿ ೨ ಕೋಟಿಯ ಬೇಡಿಕೆ ಬೇಡಿಕೆಯಾಗಿಯೇ ಉಳಿಯಿತು.


ಇದರಿಂದ ಕಟ್ಟಡ ಸಂಪೂರ್ಣ ಪೂರ್ಣಗೊಂಡಿದ್ದರೂ ಒಳಗೆ ಆಸನದ ವ್ಯವಸ್ಥೆ, ಧ್ವನಿ ಮತ್ತು ಬೆಳಕು, ಕಟ್ಟಡ ಸುತ್ತಲೂ ಇಂಟರ್ ಲಾಕ್, ಜನರೇಟರ್, ಬೋರ್ ವೆಲ್, ಕ್ಯಾಂಟಿನ್ ಮತ್ತಿತರ ವ್ಯವಸ್ಥೆಗಳು ಅಳವಡಿಕೆಯಾಗಿಲ್ಲ. ಇದಕ್ಕಾಗಿ ೨೦೧೫ ರಲ್ಲಿ ಹೆಚ್ಚುವರಿ ೨ ಕೋಟಿ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಆ ಮೊತ್ತ ಇದುವರೆಗೆ ಬಿಡುಗಡೆಗೊಂಡಿಲ್ಲ. ಇನ್ನು ಇದೇ ಪ್ರಸ್ತಾವನೆ ಈಗಿನ ಕಾಲಘಟ್ಟಕ್ಕೆ ಹೋಲಿಸಿದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಲಾಭವನ ಮಂಜೂರಾದ ಆರಂಭದಲ್ಲಿ ಬಯಲು ಸೀಮೆ ಕಲಾವಿದರು ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಾತರರಾಗಿದ್ದರು. ಆದರೆ ಇದೀಗ ಬಹುತೇಕರು ಈ ಒಂದು ಯೋಜನೆ ಇಲ್ಲಿ ಸ್ಥಾಪಿತವಾಗಿರುವುದನ್ನೇ ಮರೆತುಬಿಟ್ಟಿದ್ದಾರೆ.


ಒಟ್ಟಾರೆ ಕೋಟ್ಯಾಂತರ ರೂ ವೆಚ್ಚದ ಯೋಜನೆಯೊಂದು ಕಾಡುಪಾಲಾಗುತ್ತಿರುವುದು ಕುಶಾಲನಗರದ ನಾಗರಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾವಿರಾರು ಕಲಾವಿದರ ಬದುಕು ರೂಪಿಸಬೇಕಾದ ಕಲಾಭವನ ಪಾಳು ಬೀಳುತ್ತಿದೆ. ನಮ್ಮನ್ನಾಳುತ್ತಿರುವ ಈ ಭಾಗದ ಜನಪ್ರತಿನಿಧಿಗೆ ಇದರ ಬಗ್ಗೆ ಕಾಳಜಿಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಶೀಘ್ರದಲ್ಲೇ ಈ ಯೋಜನೆ ಲೋಕಾರ್ಪಣೆಗೊಂಡು ಕಲಾ ಸೇವೆಗೆ ಲಭ್ಯವಾಗಬೇಕಿದೆ.
-ಎಂ.ಇ.ಮೊಹಿದ್ದಿನ್, ಕಲಾಭವನ ಮೇಲುಸ್ತುವಾರಿ ಸಮಿತಿ ಕುಶಾಲನಗರ

೨೦೦೯ರಲ್ಲಿ ಕಲಾಭವನದ ಕಾಮಗಾರಿ ಶುರು ಮಾಡಿ ಎರಡು ವರ್ಷದಲ್ಲಿ ಲೋಕಾರ್ಪಣೆ ಮಾಡುತ್ತೇವೆ ಎಂದು ೧೩ ವರ್ಷ ಕಳೆದರೂ ಇನ್ನೂ ಲೋಕಾರ್ಪಣೆಗೊಂಡಿಲ್ಲ. ಇದನ್ನು ಈಗಾಗಲೇ ಜನರು ಮರೆತು ಇದೊಂದು ಕೋವಿಡ್ ಲಸಿಕೆ ಕೊಡುವ ಕೇಂದ್ರ ಎಂದು ಜನರು ಭಾವಿಸಿರುತ್ತಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟವರು ಆಸಕ್ತಿ ವಹಿಸಿ ಆದಷ್ಟು ಬೇಗ ಸಾರ್ವಜನಿಕರಿಗೆ ಉಪಯೋಗವಾಗಲು ಕಲಾಭವನ ಲೋಕಾರ್ಪಣೆಯಾಗಲಿ ಎಂದು ಆಶಿಸುತ್ತೇನೆ.
-ವೆಂಕಟೇಶ್ ಪೂಜಾರಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಕುಶಾಲನಗರದಲ್ಲಿ ಕಲಾಭವನ ನಿರ್ಮಾಣ ಮಾಡುತ್ತಿರುವುದು ನೋಡಿ ಬಹಳ ಸಂತೋಷವಾಗಿತ್ತು. ಆದರೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಇದೀಗ ಯಾರ ಉಪಯೋಗಕ್ಕೂ ಇಲ್ಲವಾಗಿರುವುದು ವಿಪರ್ಯಾಸ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಟ್ಟಡ ಪಾಳು ಬಿದ್ದಿದೆ.
-ಎಂ.ಕೃಷ್ಣ, ಜಿಲ್ಲಾಧ್ಯಕ್ಷರು, ಕರ್ನಾಟಕ ಕಾವಲುಪಡೆ