ಜಿಲ್ಲೆ

ಆ.೨ ರಂದು ಕಕ್ಕಡ-೧೮ ಆಚರಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೨೯ನೇ ವರ್ಷದ ಕಕ್ಕಡ-೧೮ ಆಚರಣೆ ಆ.೨ ರಂದು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿಶ್ವ ವಿಖ್ಯಾತ ಆರ್ಥಿಕ ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಜಗದೀಶ್ ಶೆಟ್ಟಿ ಹಾಗೂ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.


ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಗುವುದು ಮತ್ತು ಕಕ್ಕಡ-೧೮ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಗುವುದು. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಡವರು ಆರಾಧಿಸುವ ಪ್ರಕೃತಿ ಸಿರಿಯ ಕೊಡವ ಮಾತೃಭೂಮಿಯನ್ನು ಉಳಿಸಿಕೊಳ್ಳುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಅಂದು ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು. ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು. ಆರ್ಟಿಕಲ್ ೨೪೪ನೇ ವಿಧಿ ಮತ್ತು ೬ ಮತ್ತು ೮ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು. ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ರಾಷ್ಟ್ರ ಸಂಸ್ಥೆ ಯುಎನ್‌ಒ ಒಡಂಬಡಿಕೆಯಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಸಿಎನ್‌ಸಿ ಸಂಘಟನೆ ನಡೆಸುತ್ತಿರುವ ಸಾರ್ವತ್ರಿಕ ಕಕ್ಕಡ-೧೮ ಆಚರಣೆಯಲ್ಲಿ ಸರ್ವ ಕೊಡವ, ಕೊಡವತಿಯರು ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.