ವಿಜಯವಾಣಿ ಸುದ್ದಿಜಾಲ ಉಡುಪಿ
ತಮ್ಮ ವಿಭಿನ್ನ ಚಿಂತನೆಗಳ ಮೂಲಕ ಜನರಲ್ಲಿ ಬದಲಾವಣೆ ತರಲು ಕೈವಾರ ತಾತಯ್ಯ ಅಪಾರವಾಗಿ ಶ್ರಮಿಸಿದ್ದರು. ಸಮಾಜದ ಸಮಸ್ಯೆಗಳನ್ನು ಗುರುತಿಸಿ, ಬರಹಗಳ ಮೂಲಕ ಅನ್ಯರ ಬದುಕಿನ ಏಳಿಗೆ ಮಾಡಿದ್ದರು. ಅಧ್ಯಾತ್ಮ ಚಿಂತನ-ಮಂಥನ ನಡೆಸುವಲ್ಲಿ ಚಾಣಾಕ್ಷತೆ ಹೊಂದಿದ್ದರು. ಅವರ ತತ್ವಾದರ್ಶಗಳು ಹಾಗೂ ಮೌಲ್ಯಗಳು ನಮ್ಮೆಲ್ಲರ ಬದುಕಿಗೆ ಮಾದರಿಯಾಗಲಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮಾ.14ರಂದು ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಸಭೆಯ ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಜಿಲ್ಲಾಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಇಲಾಖೆಯ ವರ್ಷಾ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರವು ಸಂತರ, ವಚನಕಾರರ, ಶರಣರ ಹಾಗೂ ಇಂತಹ ಸಾಧಕರ ಜಯಂತಿ ಆಚರಿಸಿ ಅವರ ಕೊಡುಗೆ ತಿಳಿಸುವ ಕಾರ್ಯ ಮಾಡುತ್ತಿದೆ. ನ್ಯಾಯಾಂಗ, ಶಾಸಕಾಂಗ ವ್ಯವಸ್ಥೆ ಇದ್ದರೂ ಸಹ ಸಮಾಜದಲ್ಲಿ ಸಮಾನತೆ ಬಂದಿಲ್ಲ. ಸಮಾಜಕ್ಕೆ ಕೈವಾರ ತಾತಯ್ಯ ನೀಡಿದ ಕೊಡುಗೆಗಳು ಎಲ್ಲರಿಗೂ ಪ್ರೇರಣೆಯಾಗಲಿ. | ದಿನಕರ್ ಹೇರೂರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ