ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಿ ಹೃದಯದ ನಿಜಗುಣ ಶಿವಯೋಗಿಗಳು ರಚಿಸಿದ ಕೈವಲ್ಯ ಪದ್ಧತಿ ಎಂಬ ಉತ್ಕೃಷ್ಟ ಗ್ರಂಥವು ಎಲ್ಲ ಧರ್ಮಗಳ ಸಾರವನ್ನು ಒಳಗೊಂಡಿದ್ದು, ಅದು ಮುಕ್ತಿ ಪಡೆಯವ ಮಾರ್ಗ ತೋರಿಸುವ ಮೇರು ಕೃತಿಯಾಗಿದೆ ಎಂದು ಡಾ. ಆರ್.ಬಿ. ಚಿಲುಮಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಹಾಗೂ ಚಾರಿಟೇಬಲ್ ಟ್ರಸ್ಟ್ ದತ್ತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಡಾ. ಮಾರ್ಕಾಂಡೇಯ ದೊಡಮನಿ ಅವರ ಆತ್ಮಾನಂದ ತಂದೆ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ನಿಜಗುಣ ಶಿವಯೋಗಿಗಳು 7 ಅಮೂಲ್ಯ ರಚಿಸಿದ್ದಾರೆ. ಕೈವಲ್ಯ ಪದ್ಧತಿ ಕೃತಿ ಅತ್ಯಮೂಲ್ಯವಾದದ್ದು. ಸಂಸ್ಕೃತ ಭಾಷೆಯಲ್ಲಿ ರಚನೆಯಾದ ವೇದ, ಉಪನಿಷತ್ಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಅವುಗಳ ಸಾರವನ್ನು ಕನ್ನಡದಲ್ಲಿ ಬರೆದು ಲೋಕ ಪೂಜ್ಯರಾದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಪಿ. ವಾಮೋರೆ ಮಾತನಾಡಿ, ಡಾ. ಮಾರ್ಕಂಡೇಯ ದೊಡಮನಿ ಶಿಕ್ಷಕರಾಗಿ ವೃತ್ತಿ ಧರ್ಮ ಕಾಪಾಡಿದವರು. ಅವರು ಉದಾರ ಗುಣ ಮಾನವೀಯತೆಯ ಸಾಕಾರ ಮೂರ್ತಿ. ಮಾನವ ಕುಲಕದ ಉದ್ಧಾರಕ್ಕೆ ಶ್ರಮಿಸಿದ ಪೂಜ್ಯ ಶಿಷ್ಯರಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆದು ಲೇಸೆನಿಸಿಕೊಂಡವರು ಎಂದರು.
ದತ್ತಿದಾನಿ ಪರ ಡಾ. ಮಾರ್ಕಂಡೇಯ ದೊಡಮನಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ, ಮಹಾದೇವಿ ದೊಡಮನಿ, ಸುಶೀಲಾ ದೊಡಮನಿ, ಜಯಂತ ಗಾಮನಗಟ್ಟಿ, ಹರಳಯ್ಯ ದೊಡಮನಿ, ಶಾಂತವೀರ ಬೆಟಗೇರಿ, ಪಾರ್ವತಿ ಹಾಲಭಾವಿ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.