ಜಿಲ್ಲೆ

ಪೇರಿಯನ ಐನ್ ಮನೆಯಲ್ಲಿ ಸಂಭ್ರಮದ ಕೈಲ್ ಪೊಲ್ದ್ ಆಚರಣೆ

ಮಡಿಕೇರಿ: ಕೊಡಗಿನ ಆಯುಧ ಪೂಜೆ ಎಂದೇ ಹೆಸರಾಗಿರುವ ಕೈಲ್ ಪೊಲ್ದ್(ಕೈಲು ಮುಹೂರ್ತ) ಹಬ್ಬವನ್ನು ಪೇರಿಯನ ಐನ್ ಮನೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ಕೋವಿ ಮತ್ತು ಕೃಷಿ ಪರಿಕರಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ಪಟ್ಟೆದಾರ ಪೇರಿಯನ ಕುಶಾಲಪ್ಪ ಪೂಜೆ ಸಲ್ಲಿಸಿದರು. ಮಳೆಗಾಲದಲ್ಲಿ ಕೃಷಿ ಕಾರ್ಯ ಪೂರ್ಣಗೊಂಡ ನಂತರ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವ ಕೈಲ್ ಪೊಲ್ದ್ ಹಬ್ಬವನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಪೇರಿಯನ ಪ್ರಕಾಶ ತಿಳಿಸಿದರು.


ಮಾಂಸದ ವಿಶೇಷ ಖಾದ್ಯ ಸವಿದ ಕುಟುಂಬಸ್ಥರು ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡರು. ಮಹಿಳೆಯರಾದಿಯಾಗಿ ಕುಟುಂಬದ ಸದಸ್ಯರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.


ಪುತ್ತರಿರ ಐನ್ ಮನೆಯಲ್ಲಿ ಆಚರಣೆ: ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಸಾಂಪ್ರದಾಯಿಕ ಕೈಲ್ ಪೊಲ್ದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಪುತ್ತರಿರ ಕುಟುಂಬದ ಹಿರಿಯರಾದ ಪುತ್ತರಿರ ಸಾಬು ಬೋಪಯ್ಯ ಅವರು ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ ಮತ್ತು ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಿ ನೈವೇದ್ಯವನ್ನು ಅರ್ಪಿಸಿದರು.


ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕುಟುಂಬದ ಸದಸ್ಯರು ಸಂಭ್ರಮಿಸಿ ಬಹುಮಾನ ಗೆದ್ದರು. ಸಾಮೂಹಿಕ ಭೋಜನದ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಹಿರಿಯರು ಹಾಗೂ ಕಿರಿಯರು ಗಮನ ಸೆಳೆದರು.