ಮಡಿಕೇರಿ: ಕೈಲ್ ಮುಹೂರ್ತ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೊಡಗು ಜಿಲ್ಲೆಯಾದ್ಯಂತ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಪ್ರಾಕೃತಿಕ ವಿಕೋಪ, ಪ್ರವಾಹ, ಕೋವಿಡ್ ಸಂಕಷ್ಟ ಹೀಗೆ ೪ ವರ್ಷದ ನಂತರ ಜಿಲ್ಲೆಯಾಧ್ಯಂತ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ಕೃಷಿ ಚಟುವಟಿಕೆಯಲ್ಲಿ ತೊಡಗಿ ನಾಟಿಕಾರ್ಯ ಮುಗಿಸಿದ್ದ ರೈತರು, ಕೃಷಿ ಪರಿಕರ ಮತ್ತು ಕೊಡಗಿನ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಲ್ ಮುಹೂರ್ತ ಹಬ್ಬದಲ್ಲಿ ಕೋವಿ ಪೂಜಿಸಲು ’ತೋಕುಪೂ’ ಬಳಸುವುದು ವಿಶೇಷವಾಗಿದೆ. ತೋಕು ಎಂದರೆ ಕೋವಿ, ಪೂ ಎಂದರೆ ಹೂವು ಎಂದರ್ಥ. ಕಾಡುಗಳಲ್ಲಿ ಬೆಳೆಯುವ ಸುಂದರವಾದ ಈ ಹೂವು ಕೈಲು ಮುಹೂರ್ತ ಹಬ್ಬದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹೂವನ್ನು ಕಾಡಿನಿಂದ ತಂದು ಕೋವಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಾಂಸ ಖರೀದಿ: ಹಬ್ಬಕ್ಕೆ ಮುಖ್ಯ ಖಾದ್ಯವಾಗಿರುವ ಹಂದಿ ಮಾಂಸಕ್ಕಾಗಿ ಸಾರ್ವಜನಿಕರು ನಗರದ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು. ಬಿಸಿಲಿನ ವಾತಾವರಣ ಇದ್ದ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಾಂಸ, ಮದ್ಯ ಖರೀದಿಸಿ ಮನೆಯತ್ತ ಸಾಗಿದರು.