ಕಾರವಾರ: ಕಾರ್ಯ ನಿರತವಾದ ನಾಲ್ಕೂ ಘಟಕಗಳು ನಿರ್ಧಾರಿತ ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಧಿವೆ. ವಾಣಿಜ್ಯಾತ್ಮಕವಾಗಿ ಈವರಗೆ ಕೈಗಾ ವಿದ್ಯುತ್ ಉತ್ಪಾದನ ಕೇಂದ್ರವು 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ ಸುಮಾರು 1.2 ಲಕ್ಷ ಟನ್ CO2 ವಿನ ಉತ್ಪಾದನೆಯನ್ನು ತಡೆಗಟ್ಟಿದೆ ಎಂದು ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕ ಬಿ.ವಿನೋದ ಕುಮಾರ್ ತಿಳಿಸಿದರು.
ಅವರು ಮಂಗಳವಾರ ಕೈಗಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನ ಆರನೇ ಪರಮಾಣು ಕೇಂದ್ರವಾದ ಕೈಗಾದಲ್ಲಿ ಒಟ್ಟು 2280 ಮವ್ಯಾ ವಿದ್ಯುತ್ ಉತ್ಪಾದನೆ ಮಾಡಿತ್ತಿದ್ದು ಈ ಪೈಕಿ ತಲಾ 220 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಒತ್ತಡದ ಭಾರಜಲ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಒತ್ತಡದ ಭಾರಜಲ ಘಟಕಗಳ ನಿರ್ಮಾಣಕ್ಕಾಗಿ ಉತ್ಖನನ ಚಟುವಟಿಕೆಗಳು ಮುಕ್ತಾಯವಾಗಿದೆ ಎಂದರು.
ಕೈಗಾದಲ್ಲಿ ತಲಾ 700 ಮೆಗಾವಾಟ್‌ಗಳ 5 ಮತ್ತು 6 ನೇ ಘಟಕ ನಿರ್ಮಾಣ ಕಾಮಗಾರಿಯನ್ನು 2030 ರ ವೇಳೆಗೆ ಮುಕ್ತಾಯ ಮಾಡುವ ಗುರಿ ಹೊಂದಲಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿದ್ದು, ರಿಯಾಕ್ಟರ್ ನಿರ್ಮಾಣದ ಚಟುವಟಿಕೆಗಳು, ನ್ಯೂಕ್ಲಿಯರ್ ಘಟಕಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿ , ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್‌ಇಎಲ್) ಕೈಗೊಳ್ಳಲಿದ್ದು, ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿಯನ್ನು ಇಸಿಎಲ್ ಎಂಬ ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆಯೇ ಕೈಗೊಳ್ಳಲಿದೆ. ಪ್ರತಿ ಹಂತದಲ್ಲೂ ಸುರಕ್ಷತೆಯ ಮಾನದಂಡಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಲಿವೆ ಎಂದರು.
ಕೈಗಾ-1 ಘಟಕವು 962 ದಿನಗಳವರೆಗೆ ಕಾರ್ಯನಿರ್ವಹಿಸಿ, ನಿರಂತರವಾಗಿ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ರಿಯಾಕ್ಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ರಿಯಾಕ್ಟರುಗಳ ಆಯುಷ್ಯ ವೃದ್ಧಿಗಾಗಿ, ಬೃಹತ್ ಪ್ರಮಾಣದಲ್ಲಿ ಕೂಲಂಟ್ ಚಾನೆಲ್ ಬದಲಾವಣೆ ಮತ್ತು ಫೀಡರ್ ಬದಲಾವಣೆಗಾಗಿ ಕೈಗಾ-1 ಘಟಕವು ಏಪ್ರಿಲ್ 1, 2025 ರಿಂದ ಸ್ಥಗಿತಗೊಂಡಿದೆ. ಈ ಚಟುವಟಿಕೆಯು ಸುಮಾರು ಹದಿನೆಂಟು (18) ತಿಂಗಳುಗಳ ಕಾಲ ನಡೆಯುತ್ತದೆ ಎಂದರು.