ಜಿಲ್ಲೆ

ಪಾಲಿಕೆಯಲ್ಲಿ ಮತ್ತೆ ಕೈ-ತೆನೆ ದೋಸ್ತಿ !: ಮೇಯರ್-ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್-ಬಿಸಿಎಂ(ಎ)

ತುಮಕೂರು: ಕಳೆದ 6 ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹುದ್ದೆ ಮೀಸಲು ಆದೇಶ ಹೊರಬಿದ್ದಿದೆ. 4ನೇ ಅವಧಿಗೆ ಮೇಯರ್ ಸ್ಥಾನ- ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಮೇಯರ್ ಹುದ್ದೆ- ಹಿಂದುಳಿದ ವರ್ಗ(ಎ)ಗೆ ಮೀಸಲು ನಿಗದಿಪಡಿಸಿ ಬುಧವಾರ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಮತ್ತೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಸ್ತಿತ್ವಕ್ಕೆ ಬರುವುದು ನಿಶ್ಚಿತವೆನಿಸಿದೆ.


35 ಸದಸ್ಯ ಬಲಾಬಲವುಳ್ಳ ಮಹಾ ನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷ ಬಿಜೆಪಿಗೆ 12 ಸದಸ್ಯರ ಬಲ ಇದೆ. ಕಾಂಗ್ರೆಸ್, ಜೆಡಿಎಸ್ ತಲಾ 10 ಸದಸ್ಯ ರನ್ನು ಹೊಂದಿದ್ದು, ಮೂವರು ಪಕ್ಷೇತರರು ಇದ್ದಾರೆ. ಸರಳ ಬಹುಮತಕ್ಕೆ 20 ಸದಸ್ಯರ ಅಗತ್ಯವಿದ್ದು ಹಳೇ ದೋಸ್ತಿಗಳಾದ ಕಾಂಗ್ರೆಸ್-ಜೆಡಿಎಸ್ ಮತ್ತೆ ಅಧಿಕಾರ ಗದ್ದುಗೆಗೇರುವ ಹಾದಿ ಸುಗಮವಾಗಿದೆ.


ಗಾದಿ ಯಾರಿಗೆ?: ಪಾಲಿಕೆಯ ಒಟ್ಟು ಚುನಾಯಿತ ಸದಸ್ಯರಲ್ಲಿ ಪರಿಶಿಷ್ಟ ಜಾತಿ ಇಬ್ಬರು ಸದಸ್ಯೆಯರು ಕಾಂಗ್ರೆಸ್‌ಗೆ ಸೇರಿದವರು. 9ನೇ ವಾರ್ಡ್‌ನ ಮಾಜಿ ಮೇಯರ್ ದಿವಂಗತ ಸುದೀಶ್ವರ್ ಪತ್ನಿ ಎಂ.ಪ್ರಭಾವತಿ, 19ನೇ ವಾರ್ಡ್ ಬಿ.ಎಸ್.ರೂಪಶ್ರೀಗೆ ಮೇಯರ್ ಗಾದಿಗೇರುವ ಸುವರ್ಣಾವಕಾಶ ಒದಗಿಬಂದಿದೆ. ಮೊದಲ ಎರಡು ಅವಧಿಯಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡಿದ್ದವು. ಈ ಮೈತ್ರಿಗೆ ಕಳೆದ ಅವಧಿಯಲ್ಲಿ ಭಂಗ ತರಲು ಬಿಜೆಪಿ ಮೇಯರ್ ಹುದ್ದೆಗೆ ಎಸ್ಟಿ ಮೀಸಲು ‘ಅಸ್ತ್ರ ’ ಬಳಸಿ ಯಶಸ್ವಿಯಾಗಿತ್ತು. ಈಗ ಮೀಸಲು ಪ್ರಕಟವಾಗುತ್ತಿದ್ದಂತೆ ಹಳೇ ದೋಸ್ತಿಗಳು ಮತ್ತೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಮುಂದಾಗಿದ್ದಾರೆ.


ಉಪಮೇಯರ್ ಹುದ್ದೆ ಹಿಂದುಳಿದ ವರ್ಗ (ಎ)ಗೆ ಮೀಸಲಿದ್ದು ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಲಕ್ಷ್ಮೀನರಸಿಂಹರಾಜು (3ನೇ ವಾರ್ಡ್), ಎಂ.ಕೆ.ಮನು (11ನೇ ವಾರ್ಡ್), ಬಿ.ಎಸ್.ಮಂಜುನಾಥ್ (17 ನೇ ವಾರ್ಡ್), ಎ.ಶ್ರೀನಿವಾಸ್ (20 ನೇ ವಾರ್ಡ್), ಹಾಗೂ ಟಿ.ಕೆ.ನರಸಿಂಹಮೂರ್ತಿ (23 ನೇ ವಾರ್ಡ್) ಉಪಮೇಯರ್ ಸ್ಥಾನದ ರೇಸ್‌ನಲ್ಲಿ ಮಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌ನಲ್ಲೂ ಬಿಸಿಎಂ(ಎ) ವರ್ಗದವರ ಸಂಖ್ಯೆ ದೊಡ್ಡದಿದೆ.
ಬಿಜೆಪಿಯು ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳಿಗೆ ಪಾಲಿಕೆ ಆಡಳಿತ ಚುಕ್ಕಾಣಿ ಬಿಟ್ಟುಕೊಟ್ಟಿರುವುದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಏನೆಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಬೋನಸ್ ಅಧಿಕಾರ!: ಮೇಯರ್, ಉಪಮೇಯರ್ ಅವಧಿ ಫೆ.26ಕ್ಕೆ ಮುಕ್ತಾಯವಾಗಿತ್ತು. ಒಬಿಸಿ ಮೀಸಲು ಗೊಂದಲ ಹಿನ್ನೆಲೆಯಲ್ಲಿ 4ನೇ ಅವಧಿಯ ಮೇಯರ್, ಉಪಮೇಯರ್ ಚುನಾವಣೆಗೆ ಮೀಸಲು ನಿಗದಿಪಡಿಸುವ ಗೋಜಿಗೆ ಸರ್ಕಾರ ಹೋಗಿರಲಿಲ್ಲ. ಬಿಬಿಎಂಪಿ ಚುನಾವಣೆ ಕ್ಷೇತ್ರದ ಮೀಸಲು ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು 7 ತಿಂಗಳ ನಂತರ ತುಮಕೂರು ಸೇರಿ ಎಲ್ಲಾ 10 ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲು ಸಹ ಪ್ರಕಟಿಸಿದೆ. ಬಿಜೆಪಿಯ ಮೇಯರ್ ಬಿ.ಜಿ.ಕೃಷ್ಣಪ್ಪಗೆ 7 ತಿಂಗಳ ಬೋನಸ್ ಸಿಕ್ಕಿತ್ತು.

ಪಕ್ಷಗಳ ಬಲಾಬಲ
ಕಾಂಗ್ರೆಸ್- 10 (ಎಂಎಲ್ಸಿ)
ಜೆಡಿಎಸ್- 10
ಬಿಜೆಪಿ- 12 (ಎಂಎಲ್‌ಎ/ಎಂಪಿ)
ಪಕ್ಷೇತರರು- 03

ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಅಬಾಧಿತ. ನಮ್ಮ ನಡುವಿನ ಮೈತ್ರಿಗೆ ಯಾವುದೇ ಧಕ್ಕೆ ಇಲ್ಲ. ಮೀಸಲಿನಂತೆ ಕಾಂಗ್ರೆಸ್‌ನಲ್ಲಿ ರೂಪಶ್ರೀ, ಪ್ರಭಾವತಿ ಮೇಯರ್ ಸ್ಥಾನಕ್ಕೆ ಅರ್ಹರಿದ್ದು, ಜಿ.ಪರಮೇಶ್ವರ ಸೇರಿ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಉಪಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಿದ್ದು, ಅಧಿಕಾರ ಹಂಚಿಕೆ ಬಗ್ಗೆ ಜೆಡಿಎಸ್ ಜಿಲ್ಲಾ ಮುಖಂಡರ ಜತೆ ಚರ್ಚಿಸಲಾಗುವುದು.
ಎಸ್.ರಫೀಕ್ ಅಹ್ಮದ್ ಮಾಜಿ ಶಾಸಕ