ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಕೈ ಶಾಸಕನಿಂದ ಸಚಿವ ಸ್ಥಾನದ ಇಂಗಿತ ವ್ಯಕ್ತ, ಚುನಾವಣೆ ಪೂರ್ವದ ಮಾತುಕತೆ ಬಹಿರಂಗ, ಹೈಕಮಾಂಡ್ ಮಾತು ಉಳಿಸಿಕೊಳ್ಳಲಿ ಎಂದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಾಚಣೆ ವಿಚಾರ ಆಗಾಗ ಮಾರ್ದನಿಸುತ್ತಲೇ ಇದ್ದು, ಮುಂದುವರಿದ ಭಾಗವೆಂಬಂತೆ ಕಾಂಗ್ರೆಸ್ ಶಾಸಕರೊಬ್ಬರು ಅಧಿಕಾರ ಹಂಚಿಕೆ ವಿಚಾರವೊಂದನ್ನು ಹೊರಗೆಡವಿದ್ದಾರೆ !

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಸಚಿವ ಸ್ಥಾನದ ಇಂಗಿತ ಹೊರಹಾಕಿದ್ದು, ವಿಧಾನ ಸಭೆ ಚುನಾವಣೆ ಪೂರ್ವದಲ್ಲಾದ ಮಾತುಕತೆಯ ಪ್ರಕಾರ ಹೈಕಮಾಂಡ್ ನುಡಿದಂತೆ ನಡೆಯಬೇಕು ಮತ್ತು ಹಾಗೆ ನಡೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

2023 ರ ಚುನಾವಣೆ ಪೂರ್ವದಲ್ಲೇ ಸಮ ಅಧಿಕಾರ ನೀಡುವ ಭರವಸೆ ನಮ್ಮ ಹೈಕಮಾಂಡ್ ನೀಡಿತ್ತು. ನಮ್ಮ ಮೂವರನ್ನು (ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ) ಕರೆದು ‘ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬನ್ನಿ ಸಮ ಆಧಿಕಾರ ಹಂಚಿಕೆ ಮಾಡಲಾಗುತ್ತದೆ’ ಎಂದು ವರಿಷ್ಟರು ಭರವಸೆ ನೀಡಿದ್ದರು. ರಾಜ್ಯ ಮತ್ತು ಕೇಂದ್ರದ ನಾಯಕರು ಸಭೆ ನಡೆಸಿ ಮಾತನಾಡಿದ್ದರು. ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ನನಗೆ ಮಾತುಕೊಟ್ಟವರು ಈಗ ಆ ಮಾತನ್ನು ಉಳಿಸಿಕೊಳ್ಳಬೇಕು ಎಂದರು.

ಇನ್ನು ನವೆಂಬರ್ ಮತ್ತು ಡಿಸೆಂಬರ್ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶಾಸಕ ಯಶವಂತರಾಯಗೌಡ ಪಾಟೀಲರು, ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಮಾತನಾಡಬಾರದೆಂದು ಹೈಕಮಾಂಡ್ ಹೇಳಿದ್ದು ಆ ವಿಚಾರ ಮಾತನಾಡಲು ನಾನು ರಾಂಗ್ ಪರ್ಸನ್ ಎಂದರು.

ಅಧಿಕಾರ ಹಂಚಿಕೆ ವಿಚಾರ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಮಾತ್ರ ಗೊತ್ತು. ಉಳಿದವರನ್ನು ಏನೂ ಕೇಳಬೇಡಿ. ಉಳಿದರು ಏನೇ ಹೇಳಿದರೂ ಅದು ಅಪ್ರಸ್ತುತ ಎಂದರು.

ಇನ್ನು ರಾಜ್ಯಾದ್ಯಂತ ನೈಸರ್ಗಿಕ ಅಸಮತೋಲನ ಉಂಟಾಗಿದ್ದು, ಒಂದೆಡೆ ಅತಿವೃಷ್ಠಿ ಇನ್ನೊಂದೆಡೆ ಅನಾವೃಷ್ಠಿ ಕಾಡುತ್ತಿದೆ. ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದು, ಕೂಡಲೇ ಬೆಳೆ ಸಮೀಕ್ಷೆ ಮುಗಿಸಿ ಪರಿಹಾರ ಒದಗಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರಲ್ಲದೇ ಕರ್ನಾಟಕ-ಮಹಾರಾಷ್ಟ್ರ ಗಡಿ ರೇಖೆಯಾಗಿ ಹರಿಯುವ ಭೀಮಾ ನದಿಯಲ್ಲಿ ಮಹಾರಾಷ್ಟ್ರದ ಅವೈಜ್ಞಾನಿಕ ನೀತಿಯಿಂದಾಗಿ ಪ್ರವಾಹ ಉಂಟಾಗುತ್ತಿದ್ದು, ಕೇಂದ್ರ ಸರ್ಕಾರ ನೀರು ನಿರ್ವಹಣೆ ವಿಚಾರದಲ್ಲಿ ಎರಡೂ ರಾಜ್ಯಗಳ ಮಧ್ಯೆ ಸಮನ್ವಯತೆ ಸಾಧಿಸಬೇಕೆಂದು ಒತ್ತಾಯಿಸಿದರು.

ಮಹಾರಾಷ್ಟ್ರ ಸರ್ಕಾರ ಭೀಮಾ ಮತ್ತು ಸೀನಾ ನದಿ ಪಾತ್ರದಲ್ಲಿ ಅವೈಜ್ಞಾನಿಕವಾಗಿ ಬ್ಯಾರೇಜ್‌ಗಳನ್ನು ನಿರ್ಮಿಸಿದ್ದರಿಂದಲೇ ಪ್ರವಾಹ ಉಂಟಾಗುತ್ತಿದ್ದು, ಕೂಡಲೇ ಈ ಕುರಿತು ಗಮನ ಹರಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.