ಬಿಜೆಪಿ ಆರೋಪ | ವಿವಾದ ಮೂಲಕ ವೋಟ್‌ಬ್ಯಾಂಕ್ ವೃದ್ಧಿಗೆ ಯತ್ನ
ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ‘ನಮ್ಮ ಭೂಮಿ, ನಮ್ಮ ಹಕ್ಕು’ ೋಷವಾಕ್ಯದಡಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ, ಆಸ್ತಿಗಳಿಗೆ ಸಂಬಂಧಿಸಿದಂತೆ ವಕ್ಫ್ ಸೃಷ್ಟಿಸುತ್ತಿರುವ ವಿವಾದಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿತು.
ಮುದ್ದೇನಹಳ್ಳಿಯಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸಮಾಧಿಗೆ ಮಂಗಳವಾರ ಪುಷ್ಪನಮನ ಸಲ್ಲಿಸಿದ ಬಳಿಕ ಹೋರಾಟಕ್ಕೆ ಚಾಲನೆ ನೀಡಲಾಯಿತು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ವೃತ್ತದವರೆಗೆ ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪಕ್ಷದ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆರ್. ಅಶೋಕ್ ಮಾತನಾಡಿ, ಮೊದಲಿನಿಂದಲೂ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದ್ದು, ಬಹುಸಂಖ್ಯಾತರನ್ನು ವಂಚಿಸುತ್ತಿದೆ. ಕೋಮು ವಿವಾದಗಳ ಮೂಲಕ ವೋಟ್‌ಬ್ಯಾಂಕ್ ವೃದ್ಧಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಹಿಂದೆ ಮುಸ್ಲಿಮರು ಧರ್ಮದ ಆಧಾರದ ಮೇಲೆ ಹೋರಾಟ ನಡೆಸಿ, ಪಾಕಿಸ್ತಾನವನ್ನು ಪಡೆದುಕೊಂಡರು. ಅದು ಸಹ ಭಾರತದ್ದೇ ಆಗಿತ್ತು. ಈಗ ವಕ್ಫ್ ಹೆಸರಿನಲ್ಲಿ ಸರ್ಕಾರಿ ಜಾಗವನ್ನು ಕಬಳಿಸಲಾಗುತ್ತಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಒಡೆದು ಆಳುವ ನೀತಿ ಬಿಡದ ಕಾಂಗ್ರೆಸ್
ಸಂಸದ ಡಾ ಕೆ.ಸುಧಾಕರ್ ಮಾತನಾಡಿ, ಕಾಂಗ್ರೆಸ್ ಒಡೆದು ಆಳುವ ನೀತಿ ಬಿಟ್ಟಿಲ್ಲ. ಸುಳ್ಳು, ಗೊಂದಲ ಮತ್ತು ವಿವಾದದ ಕೆಲಸಗಳ ಮೂಲಕ ಸಮುದಾಯಗಳನ್ನು ಎತ್ತಿ ಕಟ್ಟುತ್ತಿದೆ. ಈಗ ಸರ್ಕಾರವೇ ನೇರ ಕುಮ್ಮಕ್ಕು ನೀಡಿ ವಕ್ಫ್ ಬಳಸಿಕೊಂಡು ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ರಾಜ್ಯಾದ್ಯಂತ ರೈತರ ಕಷಿ ಜಮೀನಿಗಳು, ಮಠಮಂದಿರಗಳು, ಸಾರ್ವಜನಿಕ ಆಸ್ತಿ ಪಾಸ್ತಿಗಳ ಪಹಣಿಗಳಲ್ಲಿ ವಕ್ಫ್ ಹೆಸರು ನಮೂದಿಸಲಾಗುತ್ತಿದೆ. ಇದರ ಹಿಂದೆ ಸಚಿವರೇ ಇದ್ದಾರೆ ಎಂದು ಆರೋಪಿಸಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಮರಳುಕುಂಟೆ ಕೃಷ್ಣಮೂರ್ತಿ, ಪಿ.ಎನ್. ಚೆನ್ನಕೃಷ್ಣಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಕಂದವಾರ ಶಾಲೆಗೆ ಭೇಟಿ
ವಕ್ಫ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿ ಸಂಗ್ರಹಿಸಲು ಚಿಕ್ಕಬಳ್ಳಾಪುರದ ಕಂದವಾರದಲ್ಲಿನ ಸರ್ಕಾರಿ ವಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಖಬರ್‌ಸ್ತಾನ್, ಹಸಿರು ಬಣ್ಣದ ಬಾವುಟ ಪ್ರದರ್ಶನ, ಕಾಂಪೌಂಡ್ ಅತಿಕ್ರಮ ಪ್ರವೇಶವನ್ನು ವೀಕ್ಷಿಸಿ, ಅಶೋಕ್ ಕಿಡಿಕಾರಿದರು. ಇದೇ ವೇಳೆ ಮುದ್ದೇನಹಳ್ಳಿ, ಕಂದವಾರ ಸೇರಿ ವಿವಿಧ ಭಾಗಗಳ ರೈತರು ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಬಗ್ಗೆ ಅಳಲು ತೋಡಿಕೊಂಡರು.
ಸಚಿವ, ಶಾಸಕರ ಬಗ್ಗೆ ವ್ಯಂಗ್ಯ
ಅಮ್ಮ ಆಂಬುಲೆನ್ಸ್ ವಾಹನದಲ್ಲಿ ವೈದ್ಯರು, ರೋಗಿ ಸೇರಿ ಎಲ್ಲವೂ ತಾನೇ ಎನ್ನುವಂತೆ ಶಾಸಕ ಪ್ರದೀಪ್ ಈಶ್ವರ್ ಹಾಕಿಸಿಕೊಂಡಿದ್ದಾರೆ. ಆತನ ದೊಡ್ಡ ಬುದ್ಧಿ ನೋಡಿ ನಗು ಬರುತ್ತಿದೆ ಎಂದು ಮಾಜಿ ಸಂಸದ ಎನ್. ಮುನಿಸ್ವಾಮಿ ವ್ಯಂಗ್ಯವಾಡಿದರು. ಹೇಗೋ ಲಾಟರಿಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದರೂ ಆತನ ಬುದ್ಧಿ ಬಿಟ್ಟಿಲ್ಲ. ಮುಂದೆ ಜನರೇ ಪಾಠ ಕಲಿಸುತ್ತಾರೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ ಕೈ ಹಿಡಿದ ಬಹುಸಂಖ್ಯಾತರು, ಆತ್ಮೀಯ ವರ್ಗದವರನ್ನು ಬಿಟ್ಟು ಬೇರೊಂದು ಸಮುದಾಯವನ್ನು ಮನವೊಲಿಸಿಕೊಳ್ಳಲು ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಬೆಂಬಲವಾಗಿ ನಿಂತಿದ್ದಾರೆ ಎಂದು ಟೀಕಿಸಿದರು.