ವರ್ಣರಂಜಿತ, ಜಿದ್ದಾಜಿದ್ದಿನ ಮಂಡ್ಯ ರಾಜಕಾರಣದ ಅಖಾಡದಲ್ಲಿ ನೇರ ಹಣಾಹಣಿಗೆ ವೇದಿಕೆ ಸಜ್ಜಾಗುತ್ತಿದೆ. ಜೆಡಿಎಸ್, ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಪೈಪೋಟಿ ಕಳೆದ ಚುನಾವಣೆಯಲ್ಲಿ ಪಕ್ಷೇತರ ಹಾಗೂ ಕೈ-ದಳ ಮೈತ್ರಿ ಅಭ್ಯರ್ಥಿ ನಡುವೆ ನಡೆದಿತ್ತು. ಈ ಬಾರಿ ಸೆಣಸಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ.
| ಕೆ.ಎನ್.ರಾಘವೇಂದ್ರ ಮಂಡ್ಯ
ಮಂಡ್ಯ ಎಂದರೆ ಇಂಡಿಯಾದಲ್ಲಿಯೇ ಸದ್ದು ಜೋರಾಗಿರುತ್ತದೆ. ರಾಜಕೀಯ ವಿಷಯಕ್ಕೆ ಬಂದರೆ ವರ್ಣರಂಜಿತ, ಊಹೆಗೂ ಮೀರಿದ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಕ್ಷೇತ್ರ. ಈ ಕಾರಣದಿಂದಲೇ ಚುನಾವಣೆ ಎದುರಾದಾಗ ಬೇರೆ ಕ್ಷೇತ್ರದವರ ಗಮನವನ್ನೂ ತನ್ನತ್ತ ಸೆಳೆಯುವಂತೆ ಮಾಡುತ್ತದೆ ಸಕ್ಕರೆನಾಡು.
ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆವರೆಗೂ ಜಿದ್ದಾಜಿದ್ದಿ ಕದನ ನಡೆಯುತ್ತದೆ. ನಾನೇ ಗೆದ್ದೆ ಎನ್ನುವಂತೆ ಹಮ್ಮು-ಬಿಮ್ಮು ತೋರಿದ ಘಟಾನುಘಟಿ ರಾಜಕಾರಣಿಗಳಿಗೂ ಸೋಲಿನ ರುಚಿ ತೋರಿಸಿರುವ ಉದಾಹರಣೆ ಸಾಕಷ್ಟಿವೆ. ಈಗಾಗಲೆ 20 ಲೋಕಸಭಾ ಚುನಾವಣೆಗಳನ್ನು ಕಂಡಿರುವ ಜಿಲ್ಲೆಯ ಜನ ಮತ್ತೊಂದು ಚುನಾವಣೆಯಲ್ಲಿ ರಾಜಕಾರಣಿಗಳ ಹಣೆಬರಹ ಬರೆಯಲು ಸಜ್ಜಾಗುತ್ತಿದ್ದಾರೆ.
2018ರ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಫಿನಿಕ್ಸ್ನಂತೆ ಎದ್ದ ಕಾಂಗ್ರೆಸಿಗರು, ಪ್ರತಿ ಹಂತದಲ್ಲಿಯೂ ದಳಕ್ಕೆ ಪೆಟ್ಟು ಕೊಡುತ್ತಲೇ ಬಂದರು. ಕಳೆದ ಲೋಕಸಭೆಯಲ್ಲಿ ಪಕ್ಷೇತರ, ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪರೋಕ್ಷ ಬೆಂಬಲ ನೀಡಿದರು. 2023ರ ಚುನಾವಣೆಯಲ್ಲಿ ಬೆಂಬಲಿತ ಕ್ಷೇತ್ರ ಸೇರಿ ಆರು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯದ ಅಮಲಿನಲ್ಲಿರುವ ಕಾಂಗ್ರೆಸಿಗರು, ಲೋಕಸಭೆಯಲ್ಲಿಯೂ ಗೆದ್ದು ಬೀಗುವ ವಿಶ್ವಾಸದಲ್ಲಿದ್ದಾರೆ. ನಾಗಮಂಗಲ ಮೂಲದ ಉದ್ಯಮಿಯೂ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ ಅವರ ಸಹೋದರ ಸ್ಟಾರ್ ಚಂದ್ರು ಹೆಸರು ಅಂತಿಮಗೊಂಡಿದೆ ಎನ್ನಲಾಗಿದೆ. ಇನ್ನು 2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್, ನಂತರದ ದಿನಗಳಲ್ಲಿ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿತು. ಪರಿಣಾಮ ಕಳೆದ ಲೋಕಸಭೆ, ಎಂಎಲ್ಸಿ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು. ಈ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಬಿಜೆಪಿಯೊಂದಿಗೆ ಮೈತ್ರಿಯಾದರೆ ಕ್ಷೇತ್ರ ಜೆಡಿಎಸ್ ತೆಕ್ಕೆ ಸೇರುವುದು ಬಹುತೇಕ ಖಚಿತ. ಅಂತೆಯೇ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಹೆಸರು ಮುಂಚೂಣಿಯಲ್ಲಿದೆ. ಎಚ್ಡಿಕೆ ಕೂಡ ಸ್ಪರ್ಧೆಗಿಳಿದರೂ ಅಚ್ಚರಿಪಡುವಂತಿಲ್ಲ.
ಮತ ಲೆಕ್ಕಾಚಾರ: 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 1,25,876 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಸುಮಲತಾ 7,03,660 ಹಾಗೂ ನಿಖಿಲ್ 5,77,784 ಮತ ಗಳಿಸಿದ್ದರು.
ದೇಶದ ಗಮನ ಸೆಳೆದಿದ್ದ ಎಲೆಕ್ಷನ್ : 2019 ಮಂಡ್ಯ ಲೋಕಸಭಾ ಚುನಾವಣೆ ರಾಜ್ಯ ಮಾತ್ರವಲ್ಲದೆ ದೇಶವನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು. ಕಾರಣ, ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಜೆಡಿಎಸ್ನ ಯುವ ನಾಯಕ ನಿಖಿಲ್ಕುಮಾರಸ್ವಾಮಿ ನಡುವಿನ ಸ್ಪರ್ಧೆ. ಒಂದು ಹಂತದಲ್ಲಿ ಅಂದಿನ ಪರಿಸ್ಥಿತಿಯನ್ನು ಮೆಲುಕು ಹಾಕುವುದಾದರೆ ಇಡೀ ದೇಶದಲ್ಲಿಯೇ ಮಂಡ್ಯ ಕ್ಷೇತ್ರದಲ್ಲಿ ಮಾತ್ರವೇ ಚುನಾವಣೆ ನಡೆಯುತ್ತಿದೆ ಎನ್ನುವಂತೆ ಭಾಸವಾಗುತ್ತಿತ್ತು. ನಟ, ಮಾಜಿ ಸಚಿವ ಅಂಬರೀಷ್ ನಿಧನದ ಬಳಿಕ ಎದುರಾದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಎನ್ನುವಂತೆ ಅವರ ಪತ್ನಿ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸಿದರು. ಇವರಿಗೆ ಬಿಜೆಪಿ ನೇರವಾಗಿ, ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡಿತು. ಅಂದು ಮೈತ್ರಿ ಸರ್ಕಾರದ ಸಿಎಂ ಆಗಿ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಕ್ಷೇತ್ರದಲ್ಲಿ ಮೂವರು ಸಚಿವರು, ಐವರು ಶಾಸಕರು, ಮೂವರು ಎಂಎಲ್ಸಿಗಳು ಜೆಡಿಎಸ್ನವರೇ ಆಗಿದ್ದರೂ ಗೆಲುವು ಸಿಗಲಿಲ್ಲ. ಈ ನಡುವೆ ಸುಮಲತಾ ಕೆಲ ತಿಂಗಳ ಹಿಂದೆ ಬಿಜೆಪಿಗೆ ಬೆಂಬಲ ಘೊಷಿಸಿದರು. ಆದರೀಗ ಸ್ಪರ್ಧೆ ಮಾಡಲು ಅವರೇ ಪರದಾಟ ನಡೆಸುವಂತಾಗಿದೆ. ಕಾಂಗ್ರೆಸ್ ಸ್ಪರ್ಧೆ ಖಚಿತವಾದರೆ, ಮೈತ್ರಿಯಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವಂತಹ ಚಟುವಟಿಕೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಆದ್ದರಿಂದ ಹಾಲಿ ಸಂಸದೆಗೆ ಬಿಜೆಪಿಯಿಂದ ಅವಕಾಶ ಸಿಗುವುದು ಗಗನಕುಸುಮ. ಮತ್ತೆ ಪಕ್ಷೇತರ ಅಭ್ಯರ್ಥಿಯಾದರೆ ಚುನಾವಣೆ ಕಬ್ಬಿಣದ ಕಡಲೆಯಾಗುವುದರಲ್ಲಿ ಅನುಮಾನವಿಲ್ಲ.
ಜಿಲ್ಲೆಗೆ ಅಪರೂಪದ ಅತಿಥಿಯಾದ ಸಂಸದೆ: ನಿರೀಕ್ಷೆಗೂ ಮೀರಿದ ಬೆಂಬಲದಿಂದ ಸಂಸದೆಯಾಗಿ ಆಯ್ಕೆಯಾದರೂ ಐದು ವರ್ಷದಲ್ಲಿ ಕ್ಷೇತ್ರದ ಜನರ ನಂಬಿಕೆಯಂತೆ ಕೆಲಸ ಮಾಡುವಲ್ಲಿ ಸುಮಲತಾ ವಿಫಲರಾಗಿದ್ದಾರೆ ಎನ್ನುವ ಆರೋಪಗಳಿವೆ. ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ಸಂಸದೆ, ತಮ್ಮ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಉದಾಹರಣೆ ಅಪರೂಪ. ಕೆಲಸಕ್ಕಿಂತ ಜೆಡಿಎಸ್ನವರನ್ನು ಟೀಕೆ ಮಾಡಿದ್ದೇ ಹೆಚ್ಚು. ಕೇಂದ್ರೀಯ ವಿದ್ಯಾಲಯಕ್ಕೆ 28 ಕೋಟಿ ರೂ., ಬಿ.ಹೊಸೂರು ಕಾಲನಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 23 ಕೋಟಿ ರೂ., ಮೈಷುಗರ್ ಕಾರ್ಖಾನೆ ಮರು ಆರಂಭಕ್ಕೆ ತನ್ನ ನಿರಂತರ ಒತ್ತಡವೇ ಕಾರಣವೆಂದು ಹೇಳಿಕೊಂಡಿದ್ದಾರೆ. 1.42 ಕೋಟಿ ರೂ. ವೆಚ್ಚದಲ್ಲಿ ಐದು ಆಂಬುಲೆನ್ಸ್, 3.60 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ನಿರ್ವಣ, 7.50 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಕಳೆ ಸೇತುವೆ ನಿರ್ವಣ, 3.40 ಕೋಟಿ ರೂ. ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆಯಡಿ ಮೂಲಸೌಕರ್ಯ ಒದಗಿಸಿದ್ದೇನೆಂದು ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಸದನದಲ್ಲಿ ಹಾಜರಾತಿ: ಹಾಲಿ ಸಂಸದೆ ಸಂಸತ್ ಕಲಾಪದಲ್ಲಿ ಶೇ.64 ಹಾಜರಾತಿ ಹೊಂದಿದ್ದಾರೆ. 24 ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. 210 ಪ್ರಶ್ನೆಗಳನ್ನು ಕೇಳಿದ್ದಾರೆ.