ಶಿವಮೊಗ್ಗ: ಕಾಗೋಡು ತಿಮ್ಮಪ್ಪ ಅವರು ಸಿಎಂ ಆಗಬೇಕಿತ್ತು. ಆದರೆ ಅವರು ಕೆಲವೊಂದು ವಿಚಾರದಲ್ಲಿ ರಾಜಿ ಆಗದೇ ಇರುವ ಕಾರಣ ಸಿಎಂ ಆಗುವ ಅದೃಷ್ಟ ಅವರಿಗೆ ಒಲಿದು ಬರಲಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಶನಿವಾರ ಮಾಜಿ ಸಿಎಂ ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇವರಾಜು ಅರಸು ಅವರು ಉಳುವವನೆ ಭೂ ಒಡೆಯ ಮಾಡಿದರೆ, ವಾಸಿಸುವವನೇ ಮನೆ ಒಡೆಯ ಆಗುವುದಕ್ಕೆ ಕಾಗೋಡು ತಿಮ್ಮಪ್ಪ ಕಾರಣರಾಗಿದ್ದಾರೆ. ಕಂದಾಯ ಸಚಿವರಾಗಿದ್ದಾಗ ಭೂ ಸುಧಾರಣೆ ಬಳಿಕ ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಲಕ್ಷಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಇಂದು ರಾಜಕೀಯ ನಾಯಕರಾಗುವುದು ಸುಲಭ. ಊರು ತುಂಬಾ ಕಟೌಟ್ ಹಾಕಿಸಿ, ಬೆಂಗಳೂರು-ದೆಹಲಿ ನಾಯಕರ ಸಂಪರ್ಕ ಇಟ್ಟು, ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಂಡಿದ್ದರೆ ರಾಜಕಾರಣಿ ಆಗಬಹುದು. ಇದಕ್ಕೆ ಹೋರಾಟದ ಅಗತ್ಯವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಭೂ ಸುಧಾರಣೆಯ ಅಸ್ಥಿಪಂಜರ ಮಾತ್ರ ಇದೆ. ಭೂ ಸುಧಾರಣೆ ಕಾಯ್ದೆ ಎನ್ನುವುದು ಲೆಕ್ಕಕ್ಕೆ ಮಾತ್ರ ಸೀಮಿತವಾಗಿದೆ. ಯಾರು ಎಷ್ಟು, ಎಲ್ಲಿ ಬೇಕಾದರೂ ಜಮೀನು ಖರೀದಿಸಬಹುದಾಗಿದೆ. ಈ ಮೂಲಕ ಭೂ ಸುಧಾರಣೆಯ ಅಸ್ತ್ರವೇ ಅವನತಿಗೆ ಆಗುತ್ತಿದೆ. ಜಾತ-ಮೀಸಲಾತಿಗೆ ಅರ್ಥವೇ ಇಲ್ಲದಂತಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಟ್ಟಿದ ಸೌಧದ ಒಂದೊಂದೆ ಇಟ್ಟಿಗೆಗಳು ಕಳಚಿ ಬೀಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದ್ದರೆ ಚುನಾವಣಾ ವ್ಯವಸ್ಥೆ ಸುಧಾರಣೆ ಆಗಬೇಕಿದೆ. ಆದರೆ ಅದು ನಮ್ಮ ರಾಜಕಾರಣಿಗಳ ಕೈಯಲ್ಲೇ ಇರುವುದರಿಂದ ಪರಿಹಾರ ಅಸಾಧ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.