ಜಿಲ್ಲೆ

ಪರೀಕ್ಷೆ ಬದುಕಿನ ಅಂತಿಮ ಘಟ್ಟವಲ್ಲ

ಹರಿಹರ: ಭಯ ತೊರೆದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಪರೀಕ್ಷೆಯೇ ಬದುಕಿನ ಅಂತಿಮ ಘಟ್ಟವಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.

ತಾಲೂಕಿನ ಬೆಳ್ಳೂಡಿಯ ಕಾಗಿನೆಲೆ ಕನಕ ಗುರುಪೀಠದ ಶಾಖಾಮಠದ ಆವರಣದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಫಲಿತಾಂಶ ಪುನಶ್ಚೇತನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಹೇಗೆ ಪಡೆಯಬಹುದೆಂಬ ಕಲೆಯನ್ನು ತಿಳಿಸುವ ಸಲುವಾಗಿಯೆ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಭವಿ ವ್ಯಕ್ತಿಗಳಿಂದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಗುರುಪೀಠದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಮೊಗಾದಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶೈಕ್ಷಣಿಕ ಜೀವನದ ಹಂತದಲ್ಲಿ ಕಠಿಣ ಪ್ರಯತ್ನವನ್ನು ಮಾಡಿದಾಗ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಶ್ರೀಮಠದಿಂದ 3 ತಿಂಗಳಿಗೊಮ್ಮೆ ಇಂತಹ ಉಪಯುಕ್ತ ಕಾರ್ಯಾಗಾರ ನಡೆಸಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎಸ್.ಕೆ.ಬಿ. ಪ್ರಸಾದ್, ಸ್ಪರ್ಧಾತ್ಮಕ ಪರೀಕ್ಷೆಗಳ ತಜ್ಞ ಎಂ. ಶಿವಕುಮಾರ್, ಕೌಶಲ್ಯ ಅಭಿವೃದ್ಧಿ ತರಬೇತುದಾರ ಅಶೋಕ್, ಶಿಕ್ಷಣ ತಜ್ಞರಾದ ನಿಂಗಪ್ಪ ಉಪ್ಪಾಳ್, ರಾಯ್ ಎಲ್. ಅರಸಿದ್ಧಿ, ಬಿ.ಸಿ. ತುಂಬಗಿ, ಶಶಿಕುಮಾರ್, ಕೆ.ವಿ. ವೆಂಕಟೇಶ್ ಬಾಬು ಇವರು ಪರೀಕ್ಷೆ- ಅಂತಿಮ ಹಂತದ ಸಿದ್ಧತೆಯ ಜತೆಗೆ ಹೆಚ್ಚು ಅಂಕಗಳಿಸುವುದು ಹೇಗೆ?, ಎಸ್ಸೆಸ್ಸೆಲ್ಸಿ ನಂತರ ಶೈಕ್ಷಣಿಕ ಅವಕಾಶಗಳು ಹಾಗೂ ಕೆರಿಯರ್ ಗೈಡ್ಲೈನ್ಸ್ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಪರೀಕ್ಷಾ ಒತ್ತಡ ನಿರ್ವಹಣೆ, ಯೋಜಿತ ಅಧ್ಯಯನ, ಓದಿದ್ದನ್ನು ಸುಲಭವಾಗಿ ಜ್ಞಾಪಕವಿಟ್ಟುಕೊಳ್ಳುವ ತಂತ್ರಗಳು ಸೇರಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಗಳನ್ನು ವಿದ್ಯಾರ್ಥಿಗಳು ತದೇಕಚಿತ್ತದಿಂದ ಆಲಿಸಿ, ತಮ್ಮೊಳಗಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ನಿಂಗಪ್ಪ, ಶೈಕ್ಷಣಿಕ ನಿರ್ದೇಶಕಿ ಶೃತಿ ಇನಾಮ್ಾರ್, ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರಿದ್ದರು.