ಜಿಲ್ಲೆ

ಕದ್ರಿ ದೇವಾಲಯದ ಕೆರೆಯಲ್ಲಿ ಅಪೂರ್ವ ಬುದ್ಧನ ಶಿಲ್ಪ ಪತ್ತೆ

Mangaluru - Hariprasad Rai


ಮಂಗಳೂರು : ನಗರದ ಕದ್ರಿ ಮಂಜುನಾಥ ದೇವಾಲಯದ ಕೆರೆಯೊಂದರಲ್ಲಿ ಅಪೂರ್ವವಾದ ಬುದ್ಧನ ಶಿಲ್ಪ ಮತ್ತು ಗುಹಾ
ಸಮುಚ್ಚಯಗಳು ಇತ್ತೀಚೆಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯ ಸಂದರ್ಭ ಪತ್ತೆಯಾಗಿದೆ. ಕೆರೆಯ ನೀರಿನಲ್ಲಿ ವಿಸರ್ಜನೆ ಮಾಡಿರುವ
ಸ್ಥಿತಿಯಲ್ಲಿ ಕಂಡುಬಂದ ಈ ಶಿಲ್ಪವನ್ನು ಕದ್ರಿ ದೇವಾಲಯದ ಆಡಳಿತಾಧಿಕಾರಿಗಳ ಅನುಮತಿ ಮೇರೆಗೆ ಮೇಲೆ ತೆಗೆದು ಅಧ್ಯಯನ ಮಾಡಲಾಯಿತೆಂದು ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ
ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಈ ಶಿಲ್ಪವು ಪದ್ಮಪೀಠದ ಮೇಲೆ ಪದ್ಮಾಸನದಲ್ಲಿ ಧ್ಯಾನಮುದ್ರೆಯಲ್ಲಿ ಕುಳಿತಂತೆ ಇದೆ. ಶಿಲ್ಪದ ಬಲಗೈ ಸಂಪೂರ್ಣ ತುಂಡಾಗಿದೆ, ಎಡಗೈನ ಹಸ್ತ ಮಡಚಿದ ಕಾಲುಗಳ ಮಧ್ಯೆ ಇರಿಸಲ್ಪಟ್ಟಿದೆ. ಎಡಭುಜದ ಮೇಲಿಂದ ಹಾದುಬಂದಿರುವ ಉತ್ತರೀಯ, ಶಿಲ್ಪದ ಎಡಭಾಗದ ಎದೆಯ ಮೇಲೆ ಚಪ್ಪಟೆಯಾಗಿ ಇಳಿಬಿಟ್ಟಂತೆ ಅಸ್ಪಸ್ಟವಾಗಿ ಕಾಣುತ್ತದೆ. ತಲೆಯಭಾಗ ತುಂಡಾಗಿದೆ. ದೇವಾಲಯದ ಹೊರ ಆವರಣದಲ್ಲಿರುವ ಸ್ಥಂಭದ
ಕೆಳಭಾಗದ ಫಲಕಗಳಲ್ಲಿ ಪದ್ಮಪೀಠದ ಮೇಲೆ ಕುಳಿತ ಧ್ಯಾನಿಬುದ್ಧರ ಉಬ್ಬುಶಿಲ್ಪಗಳಿವೆ. ಶಿಲ್ಪವು 68 ಸೆ.ಮೀ ಎತ್ತರವಾಗಿದ್ದು, 48 ಸೆ.ಮೀ ಅಗಲವಾಗಿದೆ. ಈ ಶಿಲ್ಪವು ಬಹುತೇಕ ಗೋವಾದ ಮುಶಿರಾ ವಾಡೋದಲ್ಲಿ ದೊರೆತ ಶಿಲ್ಪವನ್ನು ಹೋಲುತ್ತದೆ. ಶಿಲ್ಪದ ಕಾಲಮಾನವನ್ನು ಕ್ರಿ.ಶ. 4-6ನೇ ಶತಮಾನದ ಶಿಲ್ಪವೆಂದು ಪರಿಗಣಿಸಬಹುದಾಗಿದೆ. ಶಿಲ್ಪವು ಪದ್ಮದ ಕೆಳಭಾಗದಲ್ಲಿ ಪಾಣಿಪೀಠದ ಒಳಗೆ ಸಿಕ್ಕಿಸುವ ಗೂಟವನ್ನು ಹೊಂದಿದ್ದು, ಇದುವೇ ಕದ್ರಿಯ ಮೂಲಸ್ಥಾನ ವಿಗ್ರಹವಾಗಿತ್ತೆಂದು ಭಾವಿಸಬಹುದೆಂದು ಅವರು ತಿಳಿಸಿದ್ದಾರೆ.
*ಕದ್ರಿಯ ಗುಹೆಗಳು :
ಕದ್ರಿ ಮಂಜುನಾಥ ದೇವಾಲಯದ ಕೆರೆಗಳ ಮೇಲ್ಭಾಗದ ಗುಡ್ಡೆಯಲ್ಲಿ ಮೂರು ಗುಹೆಗಳನ್ನು ಕೆಂಪು ಮುರಕಲ್ಲಿನಲ್ಲಿ ಕಡಿದು ನಿರ್ಮಿಸಲಾಗಿದೆ. ಬಲಭಾಗದ ಗುಹೆಯ ಪ್ರವೇಶದ್ವಾರವು ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಗಳ ಪ್ರವೇಶ ದ್ವಾರದಂತಿದೆ . ಇಡೀ ರಚನೆ ಕಲ್ಮನೆ ಸಮಾಧಿಯಂತಿದೆ. ಇನ್ನೆರೆಡು ಗುಹೆಗಳು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾಗಿದ್ದು, ಚೌಕಾಕಾರದ ಎರಡು ಪ್ರವೇಶ ದ್ವಾರಗಳನ್ನು ಒಳಗೊಂಡಿವೆ. ಗುಹೆಗಳ ಹೊರ ಮತ್ತು ಒಳಭಾಗದ ಭಿತ್ತಿಗಳು ನಯವಾಗಿ ನಿರಾಡಂಬರವಾಗಿವೆ. ಗುಹೆಗಳು ಕೇವಲ ಒಂದೊಂದು ಕೋಣೆಯನ್ನು ಒಳಗೊಂಡಿದ್ದು, ದೀಪಗಳನ್ನು ಇರಿಸುವ ಗೂಡುಗಳನ್ನು ಒಳಗೊಂಡಿವೆ. ಈ ಗುಹಾ ರಚನೆಗಳನ್ನು ವಾಸ್ತವ್ಯದ ಉದ್ದೇಶಕ್ಕಾಗಿ ರಚಿಸಿದ ಗುಹೆಗಳೆಂದು ತರ್ಕಿಸಬಹುದಾಗಿದೆ. ಗುಹೆಗಳ ವಾಸ್ತು ರಚನೆಯ ವಿನ್ಯಾಸ ಮತ್ತು ಶೈಲಿಗಳನ್ನು ಗಮನಿಸಿದರೆ, ಅವುಗಳನ್ನು ಕ್ರಿ.ಶ. ಸಮಾರು 4-6ನೇ ಶತಮಾನದಲ್ಲಿ ನಿರ್ಮಿಸಿದ ಗುಹೆಗಳೆಂದು ನಿರ್ಧರಿಸಬಹುದೆಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಕದ್ರಿಯಲ್ಲಿ ಪುರಾತತ್ತ್ವ ಅನ್ವೇಷಣೆಗೆ ದೇವಾಲಯದ ಆಡಳಿತಾಧಿಕಾರಿ ಅರುಣ್ ಕುಮಾರ್ ಅನುಮತಿ ನೀಡಿ ಸಹಕರಿಸಿದ್ದಾರೆ.
ಮಣಿಪಾಲ ವಿ.ವಿ.ಯ ಪಿಎಚ್ ಡಿ ವಿದ್ಯಾರ್ಥಿ ಶ್ರೇಯಸ್ ಕೊಳಪೆ, ಶಿರ್ವ ಕಾಲೇಜಿನ ಪುರಾತತ್ತ್ವ ವಿಭಾಗದ ಉಪನ್ಯಾಸಕ ಶ್ರೇಯಸ್ ಬಂಟಕಲ್ಲು, ವಿದ್ಯಾರ್ಥಿ ರವೀಂದ್ರ ಕುಶ್ವಾ, ಮಂಗಳೂರು ವಿ.ವಿ.ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಅನ್ವೇಷಣೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.