ಜಿಲ್ಲೆ

ಕದ್ರಿ ಪಾರ್ಕ್‌ನಲ್ಲಿ ವಿಶೇಷ ಮಕ್ಕಳಿಗೆ ನಿರ್ಮಾಣವಾಗಲಿದೆಪ್ರತ್ಯೇಕ ಆಟದ ಪ್ರದೇಶ

reportermng
  • ಹರೀಶ್ ಮೋಟುಕಾನ

ವಿಶೇಷ ಚೇತನ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಮತ್ತಷ್ಟು ಆದ್ಯತೆ ನೀಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಯೋಜನೆ ರೂಪಿಸಿದೆ.
ನಗರದ ಪ್ರಮುಖ ಪಾರ್ಕ್ ಆಗಿರುವ ಕದ್ರಿ ಪಾರ್ಕ್‌ನ ಒಳಗೆ ವಿಶೇಷ ಚೇತನ ಮಕ್ಕಳಿಗೆಂದೇ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಪಾರ್ಕ್ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಮುಡಾ ನಿರ್ಧರಿಸಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ನಗರದಲ್ಲಿ ಕೆಲವೊಂದು ವಿಶೇಷ ಚೇತನರಿಗೆಂದೇ ಮೀಸಲಿಟ್ಟ ಶಾಲೆಗಳಿವೆ. ಶಾಲಾ ಮಟ್ಟದಲ್ಲಿ ಕ್ರೀಡಾಂಗಣ ಇದ್ದರೂ, ನಗರದಲ್ಲಿ ಪ್ರತ್ಯೇಕ ಸಾರ್ವಜನಿಕ ಕ್ರೀಡಾಂಗಣ ಇಲ್ಲ. ಇದರಿಂದಾಗಿ ವಿಶೇಷ ಚೇತನ ಮಕ್ಕಳು ಸಾರ್ವಜನಿಕವಾಗಿ ಆಟೋಟಗಳಲ್ಲಿ ಬೆರೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕದ್ರಿ ಪಾರ್ಕ್‌ನ ಒಂದು ಭಾಗದಲ್ಲಿ ಈ ಆಟದ ಪ್ರದೇಶ ನಿರ್ಮಾಣ ಮಾಡಲು ನಿರ್ಧರಿಸಿದೆ. ಈ ಪ್ರದೇಶವನ್ನು ಕೇವಲ ವಿಶೇಷ ಚೇತನ ಮಕ್ಕಳ ಚಟುವಟಕೆಗಳಿಗೆ ಮಾತ್ರ ನಿಗದಿಪಡಿಸಲು ಮತ್ತು ಅಲ್ಲಿ ಸಂಬಂಧಿತ ಆಟಿಕೆ, ಕುಳಿತುಕೊಂಡು ಉಪಹಾರ ಸೇವಿಸಲು ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ.
ನಗರದಲ್ಲಿರುವ ವಿಶೇಷ ಶಾಲೆಯ ಮಕ್ಕಳು ವಾರದಲ್ಲಿ ಒಂದು ದಿನವಾದರೂ ಪಾರ್ಕ್‌ನಲ್ಲಿ ಕಾಲ ಕಳೆಯಬೇಕು ಎನ್ನುವುದು ಮುಡಾ ಆದ್ಯತೆಗಳಲ್ಲೊಂದು. ಈ ಕುರಿತು ಸೂಕ್ತ ಸೌಲಭ್ಯ ಕಲ್ಪಿಸಲು ಈಗಾಗಲೇ ಸಭೆ ನಡೆಸಿದೆ. ಕದ್ರಿ ಪಾರ್ಕ್‌ನಲ್ಲಿ ಈಗಾಗಲೇ ಸಾಮಾನ್ಯ ಮಕ್ಕಳ ಆಟಕ್ಕೆಂದು ಪ್ರತ್ಯೇಕ ಜಾಗವಿದೆ. ಆದರೆ, ಅಲ್ಲಿ ವಿಶೇಷ ಚೇತನ ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿರುವ ಆಟದ ಸಾಮಾಗ್ರಿಗಳು ಈ ಮಕ್ಕಳ ಕ್ರೀಡೆಗೆ ಸ್ನೇಹಿಯಾಗಿಲ್ಲ. ಇದಕ್ಕೆ ಹೊಂದಿಕೊಂಡಂತೆ ಪ್ರತ್ಯೇಕವಾಗಿ 35 ಸೆಂಟ್ಸ್ ಜಾಗದಲ್ಲಿ ಆಟದ ಪ್ರದೇಶ ನಿರ್ಮಾಣವಾಗಲಿದೆ. ಪಾರ್ಕ್ ಒಳಗಿನ ಬಾಲಮಂಗಳ ರೈಲು ನಿಲುಗಡೆ ಪ್ರದೇಶ ಪ್ರತ್ಯೇಕ ಆಟದ ಪ್ರದೇಶ ನಿರ್ಮಾಣವಾಗಲಿದೆ. ಈ ಕುರಿತಂತೆ ಸದ್ಯದಲ್ಲೇ ರೂಪುರೇಷೆಗಳು ತಯಾರಾಗಲಿದೆ.
ಕದ್ರಿ ಪಾರ್ಕ್‌ಗೆ ಈಗಾಗಲೇ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಪಾರ್ಕ್‌ನ ಅಂದ ಹೆಚ್ಚಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ ಗಂಗನಪಳ್ಳವನ್ನು ಅಭಿವೃದ್ಧಿಪಡಿಸಲಾಗಿದೆ. ಪಾರ್ಕ್‌ನ ಒಳಗಿರುವ ಕಾರಂಜಿಗೆ ಮತ್ತಷ್ಟು ಮೆರುಗು ನೀಡಲಾಗಿದೆ. ಪಾರ್ಕ್ ಹೊರಗಿನ ರಸ್ತೆಗಳು ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಯಾಗುತ್ತಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.

  • ಬಯಲು ರಂಗ ಮಂದಿರಕ್ಕೆ ಹೊಸ ರೂಪ
    ಕದ್ರಿ ಪಾರ್ಕ್‌ನ ಒಳಭಾಗದಲ್ಲಿರುವ ಬಯಲು ರಂಗ ಮಂದಿರಕ್ಕೆ ಮುಡಾ ಹೊಸ ರೂಪ ನೀಡಲಿದೆ. ಅದರಂತೆ ಕರಾವಳಿಯ ವೈಭವವನ್ನು ಸಾರುವ ತ್ರೀಡಿ ಕಲಾಕೃತಿಗಳ ಮೂಲಕ ರಂಗ ಮಂದಿರ ಮತ್ತಷ್ಟು ಗಮನ ಸೆಳೆಯಲಿದೆ. ರಂಗಮಂದಿರದಲ್ಲಿ ಯಕ್ಷಗಾನ, ಕಂಬಳ, ಭೂತಾರಾಧನೆ ಸೇರಿದಂತೆ ವಿವಿಧ ಕಲಾ ಚಟುವಟಿಕೆಗಳನ್ನು ಇರಿಸಿ ಬಯಲು ರಂಗ ಮಂದಿರ ಅಭಿವೃದ್ಧಿಗೆ ನಿರ್ಧರಿಸಲಾಗಿದೆ.
    ಕೋಟ್:
    ವಿಶೇಷ ಚೇತನರ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲು ಮುಡಾದಿಂದ ನಿರ್ಧರಿಸಲಾಗಿದೆ. ಅದಕ್ಕಾಗಿ ಪಾರ್ಕ್ ಒಳಗಡೆ 35 ಸೆಂಟ್ಸ್ ಜಾಗ ಗುರುತಿಸಲಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಿರುವ ಮಕ್ಕಳ ಆಟದ ಜಾಗಕ್ಕೆ ಹೊಂದಿಕೊಂಡು ವರ್ಷಪೂರ್ತಿ ವಿಶೇಷ ಮಕ್ಕಳು ಆಟವಾಡಲು ಅವಕಾಶವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.
  • ರವಿಶಂಕರ ಮಿಜಾರು, ಮುಡಾ ಅಧ್ಯಕ್ಷರು.