ಕಾರವಾರ:ಇಲ್ಲಿನ ಕದ್ರಾ ಮಹಾಮಾಯಾ ದೇವಸ್ಥಾನ ಜಾತ್ರಾ ಮಹೋತ್ಸವವು ಶನಿವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತಾದಿಗಳು ದೇವರಿಗೆ ಹರಕೆ ಒಪ್ಪಿಸಿದರು.
ಕದ್ರಾದ ಶಿಂಗೇವಾಡಿ ಎಂಬ ಬೆಟ್ಟದ ಮೇಲೆ ನೆಲೆಸಿದ ಶಕ್ತಿ ದೇವತೆಯ ಬಗ್ಗೆ ಸ್ಥಳೀಯರು ಅಪಾರ ನಂಬಿಕೆ, ಭಕ್ತಿ ಇಟ್ಟಿದ್ದಾರೆ. ಕದ್ರಾ ಮಾತ್ರವಲ್ಲದೇ ಸುತ್ತಲಿನ ತಾಲೂಕುಗಳ ಜನರೂ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ. ಶುಕ್ರವಾರ ಶಿಂಗೇವಾಡಿಯಲ್ಲಿ ಹೋಮ, ಹವನಗಳು ನಡೆದವು. ಶನಿವಾರ ಬೆಳಗಿನಜಾವ ದೇವಿಯನ್ನು ಪಲ್ಲಕ್ಕಿಯಲ್ಲಿ ತಂದು ಸುಮಾರು 3 ಕಿಮೀ ದೂರದ ಜಾತ್ರೆ ಕಟ್ಟೆಯ ಮೇಲೆ ಕೂರಿಸಲಾಯಿತು. ಭತ್ತದ ಕದಿರಿನಿಂದ, ಬಂಗಾರದ ಆಭರಣಗಳಿಂದ ಅಲಂಕರಿಸಿ ಪೂಜಿಸಲಾಯಿತು. ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಉಡಿ, ಹಣ್ಣು, ಕಾಯಿ ಹರಕೆ, ತುಲಾಭಾರ ಸೇವೆ ಅರ್ಪಿಸಿದರು. ರಾತ್ರಿ ಬಲಿ ಹಾಗೂ ಇತರ ಪೂಜಾ ಕಾರ್ಯಗಳು ಜರುಗಿದವು.