ಜಿಲ್ಲೆ

ಪ್ರಕೃತಿ ಆರಾಧನೆಯ 'ಕದಿರು' ಹಬ್ಬ

ಪ್ರಶಾಂತ ಜಿ. ಭಾಗ್ವತ

ಮನೆಗಳಲ್ಲಿ ಸಂಭ್ರಮದ ಹೊಸ್ತು ಆಚರಣೆ

ದೇಗುಲಗಳಲ್ಲಿ ಭತ್ತದ ಹೊಸ ತೆನೆ ವಿತರಣೆ

ಪ್ರಶಾಂತ ಭಾಗ್ವತ, ಉಡುಪಿ
ಕರಾವಳಿಯ ಕೃಷಿ ಮತ್ತು ಬೆಳೆಗಾರರ ನಡುವೆ ಬಾಂಧವ್ಯ ಗಟ್ಟಿಗೊಳಿಸುವ ವಿಶಿಷ್ಟ ಹಬ್ಬವೇ ಕದಿರು ಹಬ್ಬ ಅಥವಾ ಹೊಸ್ತು ಹಬ್ಬ. ಶಕ್ತಿ ದೇವತೆಯರನ್ನು ಆರಾಧಿಸುವ ನವರಾತ್ರಿಯ ಸಂದರ್ಭದಲ್ಲಿಯೇ ಈ ಸಂಪ್ರದಾಯ ಆಚರಿಸುವುದು ಇನ್ನೊಂದು ವಿಶೇಷ.

ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಸಲು ಕಟಾವಿಗೆ ಬರುವ ಸಂದರ್ಭದಲ್ಲಿ ಕದಿರು ಹಬ್ಬ ಆಚರಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆ, ಕುಂದಾಪುರ ತಾಲೂಕಿನಲ್ಲಿ ಇದು ಸಂಪ್ರದಾಯವಾಗಿದ್ದು, ಉಡುಪಿಯಲ್ಲೂ ಆಚರಿಸಲ್ಪಡುತ್ತದೆ.

ಮಣಿಪಾಲದ ಮಂಚಿಕೆರೆ ನಾಗಬನದಲ್ಲಿ

ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಮಂಚಿಕೆರೆ (ಮಣಿಪಾಲ)ಯ ವಾಸುಕಿ ನಾಗಯಕ್ಷಿ ಸನ್ನಿಧಾನದ ನಾಗಬನದಲ್ಲಿ ಕಳೆದ 19 ವರ್ಷದಿಂದ ಕದಿರು ಪೂಜೆ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಭತ್ತದ ಹೊಸ ತೆನೆ ತಂದು, ಅದನ್ನು ಸಣ್ಣ ಸಣ್ಣ ಕಟ್ಟುಗಳಾಗಿ ಮಾಡಿ, ದೇವರ ಮುಂಭಾಗದಲ್ಲಿಟ್ಟು ಪೂಜಿಸುತ್ತಾರೆ. ಬಳಿಕ ಸುತ್ತಮುತ್ತಲಿನ 800ಕ್ಕೂ ಅಧಿಕ ಕುಟುಂಬಗಳಿಗೆ ಕದಿರು ವಿತರಿಸಲಾಗುತ್ತದೆ.

ರೈತನ ಗದ್ದೆಯ ಕದಿರು

ಸಂಪಿಗೆ ನಗರದ ಓರ್ವ ರೈತನ ಗದ್ದೆಯಿಂದ (ಮನೆಯಿಂದ) ಹೊಸ ಕದಿರನ್ನು ನಾಗಬನಕ್ಕೆ ತರಲಾಗುತ್ತದೆ. ದೇಗುಲದ ಅರ್ಚಕ ಪ್ರಕಾಶ್​ ಭಟ್​ ಅದನ್ನು ಪೂಜಿಸಿ, ಮಹಾಮಂಗಳಾರತಿ ಮಾಡುತ್ತಾರೆ. ಬಳಿಕ ವಾಸುಕಿ ನಾಗಯಕ್ಷಿ ಸಮಿತಿಯ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಊರಿನ ಜನರಿಗೆ ಪ್ರಸಾದದ ರೂಪದಲ್ಲಿ ಹೊಸ್ತು ವಿತರಿಸುತ್ತಾರೆ. ಜನರು ಅದನ್ನು ಮನೆಗೆ ಕೊಂಡೊಯ್ದು ದೇವರ ಕೋಣೆಯಲ್ಲಿ, ಮನೆಯ ಹೊಸ್ತಿಲಲ್ಲಿ ಅಥವಾ ವಾಹನಗಳಿಗೆ ಕಟ್ಟುತ್ತಾರೆ. ಇದರಿಂದ ದುಷ್ಟ ಶಕ್ತಿಗಳ ಸಂಹಾರವಾಗಿ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ ಎನ್ನುತ್ತಾರೆ ನರಸಿಂಹ ಮೂರ್ತಿ ಮಣಿಪಾಲ.

ಮನೆಗಳಲ್ಲಿ ಸಡಗರ

ಕದಿರು ಹೊರುವವರು ಹೊಸ ಬಟ್ಟೆ, ರುಮಾಲು ಸುತ್ತಿ, ಭತ್ತದ ಹೊಸ ತೆನೆಯನ್ನು ಬಾಳೆಯ ಎಲೆ ಮೇಲಿಟ್ಟು, ಹರಿವಾಣಕ್ಕೆ ಹಾಕಿ, ತಲೆ ಮೇಲೆ ಹೊತ್ತುಕೊಂಡು ಬರುತ್ತಾರೆ. ಮನೆಯಲ್ಲಿರುವ ಮಕ್ಕಳು ಜಾಗಟೆ ಬಾರಿಸುತ್ತ ಜತೆಯಲ್ಲಿ ಬರುತ್ತಾರೆ. ಮನೆಯ ಯಜಮಾನಿಯು ಕದಿರು ಹೊತ್ತು ತಂದ ಯಜಮಾನನ ಕಾಲಿಗೆ ನೀರೆರೆದು, ನಮಸ್ಕರಿಸಿ ಬರ ಮಾಡಿಕೊಳ್ಳುತ್ತಾಳೆ. ಇದು ಕದಿರು ಹಬ್ಬದ ಆಚರಣೆಯ ವಿಧಾನವಾಗಿದೆ ಎನ್ನುತ್ತಾರೆ ಮಂಚಿಕೆರೆಯ ವಾಸುಕಿ ನಾಗಯಕ್ಷಿ ಸಮಿತಿಯ ಪ್ರ.ಕಾರ್ಯದರ್ಶಿ ವಿಶ್ವಮೂರ್ತಿ ಆಚಾರ್ಯ.

ಮನೆಯೊಳಗೆ ಧಾನ್ಯ ಒಯ್ಯುವ ಸಂಪ್ರದಾಯ

ಮಾನವನ ನಿತ್ಯದ ಜೀವನದಲ್ಲಿ ಪ್ರಮುಖ ಆಹಾರ ಪ್ರಕ್ರಿಯೆಗೆ ಸಂಬಂಧಿಸಿ ಗೌರವ ಸೂಚಿಸುವ ಆಚರಣೆಯೇ 'ಕದಿರು ಹಬ್ಬ'ದ ವಿಶೇಷತೆಯಾಗಿದೆ. ಮನೆ ಮಂದಿಯೆಲ್ಲ ಸೇರಿ ಆಚರಿಸುವ ಸಂಪ್ರದಾಯವೂ ಇದಾಗಿದೆ. 'ಹೊಸ್ತು' ತರುವ ಅಥವಾ ಕದಿರು ಹಬ್ಬದ ದಿನದಂದು ಸಗಣಿಯಿಂದ ಮನೆಯ ಅಂಗಳ ಸಾರಿಸಿ, ಸುಂದರ ರಂಗವಲ್ಲಿ ಹಾಕಲಾಗುತ್ತದೆ. ಮನೆಯ ಎದುರು ಇರುವ ಮೆಟ್ಟಿ ಕಂಬಕ್ಕೆ ಪೂಜೆ ಸಲ್ಲಿಸಿ, ಗದ್ದೆಯಿಂದ ಅಥವಾ ದೇಗುಲದಿಂದ ತಂದ ಕದಿರನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಬಳಿಕ ಮನೆಯ ಯಜಮಾನ ಆ ಹೊಸ ಫಸಲನ್ನು ತಲೆಯ ಮೇಲೆ ಹೊತ್ತು, ಮನೆಯ ಒಳಗೆ ಒಯ್ಯುತ್ತಾನೆ. ಈ ದಿನದಂದು ವಿಶೇಷ ಬಗೆಯ ತಿಂಡಿ-ತಿನಿಸು ಸಿದ್ಧಪಡಿಸಿಕೊಂಡು ಮಧ್ಯಾಹ್ನದ ಊಟದ ವೇಳೆ ಬಂಧು-ಬಳಗ ಹಾಗೂ ನೆಂಟರಿಗೆ ಉಣಬಡಿಸುವ ವಿಶಿಷ್ಟ ಆಚರಣೆಯಾಗಿದೆ.

ಕದಿರು ಹಬ್ಬವು ಪ್ರಕೃತಿ ಮತ್ತು ರೈತರ ಬಾಂಧವ್ಯ ವೃದ್ಧಿಸುವ ಆಚರಣೆಯಾಗಿದೆ. ನಮ್ಮೆಲ್ಲರ ಹೊಟ್ಟೆ ತುಂಬಿಸುವ ಅಥವಾ ಹಸಿವು ನೀಗಿಸುವ ಭತ್ತ (ಅಕ್ಕಿ)ಕ್ಕೆ ಗೌರವ ಸಲ್ಲಿಸುವುದು ಈ ಆಚರಣೆಯ ಉದ್ದೇಶವಾಗಿದೆ. ನಮ್ಮ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ಇಂತಹ ಆಚರಣೆಗಳೆಲ್ಲ ನಶಿಸಿ ಹೋಗುತ್ತಿವೆ. ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕೆಂಬ ಸದಿಚ್ಛೆಯಿಂದ ನಾವು ಹೊಸ ಕದಿರನ್ನು ಪೂಜಿಸಿ, ಜನರಿಗೆ ವಿತರಿಸುತ್ತಿದ್ದೇವೆ. | ಶಾಂತಾರಾಮ್​ ಶೆಟ್ಟಿ.ಅಧ್ಯಕ್ಷ. ವಾಸುಕಿ ನಾಗಯಕ್ಷಿ ಸಮಿತಿ, ಮಂಚಿಕೆರೆ, ಮಣಿಪಾಲ